Dalith Protest – ನಿವೇಶನ, ಭೂಮಿ ಮಂಜೂರು, ಮೂಲಭೂತ ಸೌಕರ್ಯಗಳು, ದಲಿತರ ಮೇಲಿನ ದೌರ್ಜನ್ಯಗಳು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಜಿಲ್ಲೆಯಾದ್ಯಂತ ತಾಲೂಕು ಮಟ್ಟದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಿದರು.
ಈ ವೇಳೆ ದಸಂಸ ಖಜಾಂಚಿ ಜಿ.ವಿ.ಗಂಗಪ್ಪ ಮಾತನಾಡಿ, ನಮಗೆ ಸ್ವಾತಂತ್ಯ್ರ ಬಂದು ವರ್ಷಗಳು ಕಳೆದರೂ ಇನ್ನೂ ಭಾರತದಲ್ಲಿ ದಲಿತರು ಸಂಕಷ್ಟದಲ್ಲಿಯೇ ಇದ್ದಾರೆ. ಇಂದಿಗೂ ಸಹ ದಲಿತರಿಗೆ ಸಿಗಬೇಕಾದಂತಹ ಸೌಲಭ್ಯಗಳಾಗಲಿ, ಮೂಲಭೂತ ಸೌಕರ್ಯಗಳಾಗಲಿ ಸಿಗುತ್ತಿಲ್ಲ. ಆದರೆ ಆಡಳಿತ ನಡೆಸುವಂತಹ ಸರ್ಕಾರಗಳು ಮಾತ್ರ ದಲಿತರನ್ನು ಉದ್ದಾರ ಮಾಡುತ್ತೇವೆ ಎಂದು ಅವರ ಮತಗಳನ್ನು ಪಡೆದು ವಂಚನೆ ಮಾಡುತ್ತಿವೆ. ಇಂದು ದಲಿತರು ಹೋರಾಟಗಳನ್ನು ನಡೆಸಿದರೂ ಅವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ದಲಿತರ ಕೆಲಸಗಳು ಆಗುತ್ತಿಲ್ಲ. ಕರೆನ್ಸಿ ನೋಟುಗಳನ್ನು ಕೊಟ್ಟರೇ ಮಾತ್ರ ಕೆಲಸಗಳು ನಡೆಯುತ್ತವೆ. ಇನ್ನೂ ಹೋರಾಟ ನಡೆಸಿದವರು ಮೇಲೆ ಪೊಲೀಸರನ್ನು ಬಳಸಿಕೊಂಡು ಕೇಸ್ ಗಳನ್ನು ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ದಲಿತ ಹೋರಾಟಗಾರರನ್ನು ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ದಲಿತರ ಹೋರಾಟಗಳನ್ನು ಹತ್ತಿಕ್ಕಬಹುದೆಂಬ ಭ್ರಮೆಯಲ್ಲಿದ್ದರೇ ಅದು ಸಾಧ್ಯವಿಲ್ಲ. ಓರ್ವ ದಲಿತ ಹೋರಾಟಗಾರ ಮೃತಪಟ್ಟರೇ 10 ಜನ ಹೋರಾಟಗಾರರು ಹುಟ್ಟಿಕೊಳ್ಳುತ್ತಾರೆ. ಜೊತೆಗೆ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಸಹ ತುಂಬಾನೆ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ನಂತರ ದಸಂಸ ತಾಲೂಕು ಸಂಚಾಲಕ ಚೆಂಡೂರು ರಮಣ ಮಾತನಾಡಿ, ಡಾ.ಬಾಬಾ ಸಾಹೆಬ್ ಅಂಬೇಡ್ಕರ್ ರವರು ದಲಿತರ ಅಭಿವೃದ್ದಿಗಾಗಿ ಸಂವಿಧಾನದಲ್ಲಿ ಹಲವು ಹಕ್ಕುಗಳು, ಸೌಲಭ್ಯಗಳನ್ನು ಒದಗಿಸಿದ್ದಾರೆ. ಆದರೆ ಅವುಗಳು ದಲಿತರಿಗೆ ಸಿಗೋದು ತುಂಬಾನೆ ಕಷ್ಟಕರವಾಗಿದೆ. ಇಂದಿಗೂ ಅನೇಕ ದಲಿತರು ಮನೆ, ಭೂಮಿ ಇಲ್ಲದೇ ಕೂಲಿ ಮಾಡಿ ಜೀವನ ಸಾಗಿಸುವಂತಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಕಡೇಹಳ್ಳಿ ಗ್ರಾಮದ ದಲಿತರಿಗೆ ನಿವೇಶನಗಳಿಗಾಗಿ ಪ್ರತಿಭಟನೆ ನಡೆಸಲಾಗಿತ್ತು. ಅದೇ ರೀತಿ ತಾಲೂಕಿನ ಹಲವು ಕಡೆ ನಿವೇಶನಗಳ ಸಮಸ್ಯೆಯಿದೆ. ಜೊತೆಗೆ ಅನೇಕ ಕಡೆ ಅಂಬೇಡ್ಕರ್ ಭವನಗಳ ನಿರ್ಮಾಣ ಮಾಡಬೇಕಿದೆ. ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದ ದಲಿತರಿಗೆ ಇನ್ನೂ ಭೂಮಿ ಸಿಕ್ಕಿಲ್ಲ. ಇದೇ ರೀತಿಯ ಅನೇಕ ಸಮಸ್ಯೆಗಳನ್ನು ದಲಿತರು ಎದುರಿಸುತ್ತಿದ್ದಾರೆ. ಆದ್ದರಿಂದ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕು ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿಯನ್ನು ಹಮ್ಮಿಕೊಳ್ಳಲಾಗಿದ್ದು, ನಮ್ಮ ಬೇಡಿಕೆಗಳು ಈಡೇರುವ ತನಕ ಧರಣಿಯನ್ನು ಕೈಬಿಡುವುದಿಲ್ಲ ಎಂದರು.
ಇನ್ನೂ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಸಿಗ್ಬತ್ತುಲ್ಲಾ ಹಾಗೂ ತಾ.ಪಂ. ಇಒ ನಾಗಮಣಿ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅಧಿಕಾರಿಗಳ ಮಾತುಗಳಿಗೆ ಮಣಿಯದ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಈ ಸಮಯದಲ್ಲಿ ದಲಿತ ಮುಖಂಡರಾದ ಇಸ್ಕೂಲಪ್ಪ, ರಾಜು, ನರಸಿಂಹಪ್ಪ, ಆದಿನಾರಾಯಣಪ್ಪ, ಅಮರಾವತಿ, ಕೆ.ಎನ್.ನರಸಿಂಹಪ್ಪ ಸೇರಿದಂತೆ ಹಲವರು ಇದ್ದರು.