ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಕುಶಾವತಿ ನದಿ ಹರಿಯುತ್ತಿದ್ದು, ಈ ನೀರು ಹರಿಯುವ ಅನೇಕ ಕಾಲುವೆಗಳು ಒತ್ತುವರಿಯಾಗಿದೆ. ಇದರಿಂದಾಗಿ ನೀರು ವ್ಯರ್ಥವಾಗಿ ಹರಿಯುತ್ತಿದೆ. ಅದರ ಬದಲು ರಾಜಕಾಲುವೆಯ ಒತ್ತುವರಿ ತೆರವುಗೊಳಿಸಿದರೇ ಆ ನೀರು ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಅಧಿಕಾರಿಗಳು ಈ ಕುರಿತು ಕ್ರಮ ವಹಿಸಿ ರೈತರಿಗೆ ಅನುಕೂಲ (Local News) ಮಾಡಿಕೊಡಬೇಕೆಂದು ನುಲಿಗುಂಬ ಸೇರಿದಂತೆ ಹಲವು ಗ್ರಾಮಸ್ಥರು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಕುರಿತು ನುಲಿಗುಂಬ ಗ್ರಾಮಸ್ಥ ಈಶ್ವರರೆಡ್ಡಿ ಮಾತನಾಡಿ, ನುಲಿಗುಂಬ, ಯರಹಳ್ಳಿ, ಗುಂಡ್ಲಹಳ್ಳಿ, ನಲ್ಲಗೊಂಡಯ್ಯಗಾರಹಳ್ಳಿ, ಪುಲಸಾನಿವೊಡ್ಡು, ಹಂಪಸಂದ್ರ, ಬೆಣ್ಣೆಪರ್ತಿ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಕುಶಾವತಿ ನದಿ ನೀರಿನಿಂದ ತುಂಬಾ ಅನುಕೂಲವಾಗಲಿದೆ. ಜೊತೆಗೆ ಕುಶಾವತಿ ನದಿ ಹರಿಯುವ ನೀರು ಸುಮಾರು 4 ಕೆರೆಗಳಿಗೆ ನೀರು ತುಂಬಿಸಲು ರಾಜಕಾಲುವೆ ಸಹ ಇದೆ. ಆದರೆ ರಾಜಕಾಲುವೆ ಒತ್ತುವರಿಯಾಗಿದೆ. ರಾಜಕಾಲುವೆಯ ಅಕ್ಕಪಕ್ಕದ ಜಮೀನಿನವರು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಜೊತೆಗೆ ವಿಜಯರೆಡ್ಡಿ ಫಾರ್ಮಾ ಹತ್ತಿರ ಸಹ ರಾಜಕಾಲುವೆ ಮುಚ್ಚಿಹಾಕಿದ್ದಾರೆ. ಇದರಿಂದಾಗಿ ಕೆರೆಗಳಿಗೆ ನೀರು ಹರಿಯದಂತೆ ಬರುವ ನೀರು ಆಂಧ್ರಪ್ರದೇಶದ ಕಡೆ ಹರಿಯುತ್ತಿದೆ.
ಸುಮಾರು 4-5 ಗ್ರಾಮಗಳ ಕೆರೆಗಳಿಗೆ ಈ ನದಿ ನೀರು ಸಹಕಾರಿಯಾಗಿತ್ತು. ನೀರು ಹರಿಯದೇ ಇರುವ ಕಾರಣದಿಂದ ಕುಡಿಯುವ ನೀರು ಕೊಳವೆ ಬಾವಿಗಳು ಬತ್ತಿಹೋಗಿದೆ. ಈ ಕೆರೆಗಳಿಗೆ ನೀರು ತುಂಬಿದರೆ ರೈತರಿಗೆ, ಧನ ಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಅನುಕೂಲ ಆಗುತ್ತಿದ್ದು, ಆದರೆ ಅಕ್ಕಪಕ್ಕದ ಕೆಲ ರೈತರು ಹಾಗೂ ರೆಸಾರ್ಟ್‌ನವರು ಅವರು ಕಾಮಗಾರಿ ಮಾಡುವ ಸಂದರ್ಭದಲ್ಲಿ ಸದರಿ ಕಾಲುವೆಯನ್ನು ನಾಶಪಡಿಸಿರುವುದರಿಂದ ನೀರು ಕಾಲುವೆಯಲ್ಲಿ ಹರೆಯದೆ ಪೋಲಾಗುತ್ತಿರುತ್ತದೆ. ಈ ಕಾಲುವೆಯಲ್ಲಿ ಹೂಳು ತೆಗೆಸಿ ಸರಿಪಡಿಸಿದಲ್ಲಿ ರೈತರ ಕೊಳವೆಬಾವಿಗಳು ಹಾಗೂ ಅರಣ್ಯ ಪಕ್ಕದಲ್ಲಿರುವ ಕೆರೆಗಳಿಂದ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ಸದರಿ ನೀರು ಪೋಲು ತಡೆದು ಜನರು ಹಾಗೂ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ವೇಳೆ ವಿವಿಧ ಗ್ರಾಮಗಳ ಮುಖಂಡರಾದ ಸುದರ್ಶನ್ ರೆಡ್ಡಿ, ಬಾಬುರೆಡ್ಡಿ, ಮುರಳಿ, ನಾರಾಯಣಸ್ವಾಮಿ, ನಾಗರಾಜಪ್ಪ, ನರಸಿಂಹಮೂರ್ತಿ, ಕೃಷ್ಣಪ್ಪ ಸೇರಿದಂತೆ ಹಲವರು ಇದ್ದರು.