Local News: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅರವಿಂದ ಪ್ರೌಢಶಾಲೆಯಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ರವರ ಜನ್ಮ ದಿನಾಚರಣೆಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೇಳೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಾವಿತ್ರಿ ಬಾಯಿ ಪುಲೆ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಲಾಯಿತು.
ಈ ಸಮಯದಲ್ಲಿ ಶಾಲೆಯ ಶಿಕ್ಷಕಿ ಕೋಮಲ ಮಾತನಾಡಿ ಹಿಂದಿನ ಕಾಲದಲ್ಲಿ ಸ್ತ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂದು ಭಾವಿಸಿದ್ದರು. ಮಹಿಳೆಯರು ಶಾಲೆಗೆ ಹೊರಟಾಗ ಕೆಲವರು ಕೇಕೆ ಹಾಕಿ ನಗುತ್ತಿದ್ದರು. ಇದರಿಂದ ಧೃತಿಗೆಡದ ಸಾವಿತ್ರಿ ಬಾಯಿ ಪುಲೆರವರು ಬೇಸರಗೊಳ್ಳದೆ ನಮ್ಮ ಮೇಲೆ ಎರಚುವ ಸೆಗಣಿ ತೂರುವ ಕಲ್ಲುಗಳನ್ನು ಹೂವುಗಳೆಂದು ಭಾವಿಸಿ ಶಾಲೆಯಲ್ಲಿ ಮಕ್ಕಳು ಬರುವುದರೊಳಗಾಗಿ ಬ್ಯಾಗಿನಲ್ಲಿದ್ದ ಮತ್ತೊಂದು ಸೀರೆಯನ್ನು ಉಟ್ಟುಕೊಂಡು ಪಾಠ ಮಾಡಲು ಮುಂದಾಗುತ್ತಿದ್ದರು. ಈ ನಿಟ್ಟಿನಲ್ಲಿ ಸಾವಿತ್ರಿಬಾಯಿ ಫುಲೆ ಹೋರಾಟಗಳು ಇಂದಿನ ಮಹಿಳೆಯರು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದರು.
ನಂತರ ಶಿಕ್ಷಕ ರವಿ ಮಾತನಾಡಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ, ಜಾಗತಿಕ ಮನುಕುಲ, ಮಾನವ ಹಕ್ಕುಗಳ ಪ್ರವರ್ತಕಿ ಜಗತ್ತಿನ ಮಹಾನ್ ಮನವತಾವಾದಿ ಸಾವಿತ್ರಿಬಾಯಿ ಫುಲೆ ಅವರನ್ನು ಆಧುನಿಕ ಶಿಕ್ಷಣದ ಮಹಾತಾಯಿ ಎಂದರೇ ತಪ್ಪಾಗಲಾರದು. ಸಾವಿತ್ರಿಬಾಯಿ ರವರು ಕೇವಲ ಶಿಕ್ಷಣ ಕ್ಷೇತ್ರವಲ್ಲದೇ ಅಂದಿನ ಕಾಲದಲ್ಲಿದ್ದ ಮೂಡನಂಬಿಕೆಗಳನ್ನು ಸಹ ವಿರೋಧಿಸುತ್ತಿದ್ದರು. ವಿಧವೆಯರ ಹಕ್ಕುಗಳ ಪರ, ಬಾಲ್ಯ ವಿವಾಹಕ್ಕೆ ವಿರೋಧ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಅವಿರಥವಾಗಿ ಹೋರಾಡಿದ ಮಹಾನ್ ಚೇತನರಾಗಿದ್ದಾರೆ. ಅಂದಿನ ಪುರುಷ ಪ್ರಧಾನ ಸಮಾಜದಲ್ಲಿ ಸುಮಾರು 14 ಶಾಲೆಗಳನ್ನು ತೆರೆದು ಸಾವಿರಾರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರು ಎಂದರು. ಈ ವೇಳೆ ಅರವಿಂದ ಶಾಲೆಯ ಶಿಕ್ಷಕರಾದ ಶಂಕರಪ್ಪ, ದೈಹಿಕ ಶಿಕ್ಷಕ ಮನೋಹರ್ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.