Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ವ್ಯಾಪ್ತಿಯ ನಲ್ಲಗೊಂಡಯ್ಯಗಾರನಹಳ್ಳಿ, ಆದಿನಾರಾಯಣಹಳ್ಳಿ ಹಾಗೂ ದಪ್ಪರ್ತಿ ಒಡ್ಡು ಬಳಿ ಹರಿಯುವಂತಹ ಕಾಲುವೆಗಳ ಮೇಲೆ ಬ್ರಿಡ್ಜ್ ನಿರ್ಮಾಣ ಮಾಡಲು ಸುಮಾರು 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು.
ಗುಡಿಬಂಡೆ ತಾಲೂಕಿನ ಈ ಮೂರು ಗ್ರಾಮಗಳಲ್ಲಿ ಹರಿಯುವ ಕಾಲುವೆಯ ಮೇಲೆ ಸೇತುವೆ ನಿರ್ಮಾಣ ಮಾಡುವ ಸಂಬಂಧ ಸ್ಥಳ ಪರಿಶೀಲನೆ ಮಾಡಿ ಮಾತನಾಡಿದ ಶಾಸಕ ಸುಬ್ಬಾರೆಡಿಯವರು, ಸುಮಾರು ದಿನಗಳಿಂದ ಈ ಭಾಗದ ಜನರು ನೀರು ಹರಿಯುವಂತಹ ಕಾಲುವೆಗಳ ಮೇಲೆ ಮೇಲ್ಸೇತುವೆ ನಿರ್ಮಾಣ ಮಾಡಲು ಮನವಿ ಮಾಡುತ್ತಿದ್ದರು. ಕೃಷಿ ಚಟುವಟಿಕೆ ಸೇರಿದಂತೆ ಹಲವು ಕೆಲಸಗಳಿಗೆ ತೆರಳಲು ಸ್ಥಳೀಯರು ಸಮಸ್ಯೆ ಪಡುತ್ತಿದ್ದರು. ಇದರಿಂದಾಗಿ ನಮ್ಮ ಸರ್ಕಾರದೊಂದಿಗೆ ಮಾತನಾಡಿ ಸುಮಾರು 10 ಕೋಟಿಯಷ್ಟು ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದರು.
ಇನ್ನೂ ಈಗಾಗಲೇ ಆದಿನಾರಾಯಣಹಳ್ಳಿ ಬಳಿಯ ಸೇತುವೆಗೆ ಟೆಂಡರ್ ಆಗಿದೆ ಶೀಘ್ರದಲ್ಲೇ ಗುದ್ದಲಿ ಪೂಜೆಯನ್ನು ನೆರವೇರಿಸುತ್ತೇನೆ. ಉಳಿದ ನಲ್ಲಗೊಂಡಯ್ಯಗಾರಹಳ್ಳಿ ಹಾಗೂ ದಪ್ಪರ್ತಿ ಒಡ್ಡು ಬಳಿ ಮೇಲ್ಸುತುವೆ ನಿರ್ಮಾಣಕ್ಕಾಗಿ ಸದ್ಯ ಸ್ಥಳ ಪರಿಶೀಲನೆ ಮಾಡಿದ್ದೇನೆ. ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಯಾವ ರೀತಿ ಕಾಮಗಾರಿ ನಡೆಯಬೇಕು ಎಂಬುದನ್ನು ಇಂಜನೀಯರ್ ಗಳ ಜೊತೆಗೆ ವೀಕ್ಷಣೆ ಮಾಡಿದ್ದೇನೆ. ಈ ಎರಡೂ ಕಾಮಗಾರಿಗಳೂ ಸಹ ಶೀಘ್ರದಲ್ಲೇ ನೆರವೇರಲಿದೆ. ಇನ್ನೂ ಗುಡಿಬಂಡೆ ಕೆರೆ ಕೋಡಿಯ ಅಭಿವೃದ್ದಿಗೆ 4 ಕೋಟಿ ಅನುದಾನ ನೀಡಲಾಗಿದೆ. ಅಲ್ಲಿ ಕಾಮಗಾರಿ ನಡೆಸಲು ಈ ಅನುದಾನ ಸಾಕಾಗುವುದಿಲ್ಲ. ಈ ಬಜೆಟ್ ನಲ್ಲಿ ಮತ್ತಷ್ಟು ಅನುದಾನ ಒದಗಿಸಲು ಮನವಿ ಮಾಡುತ್ತೇನೆ. ಅನುದಾನವನ್ನು ಆದಷ್ಟು ಶೀಘ್ರವಾಗಿ ಬಿಡುಗಡೆ ಮಾಡಿಸಲು ಶ್ರಮಿಸುತ್ತೇನೆ ಎಂದರು.
ಜನರೂ ಸಹ ಕಾಮಗಾರಿ ನಡೆಯುವಾಗ ಆಗಾಗ ಪರಿಶೀಲನೆ ನಡೆಸುತ್ತಿರಬೇಕು. ಕಾಮಗಾರಿ ಗುಣಮಟ್ಟ ಕಾಪಾಡುವುದು ಸ್ಥಳೀಯರ ಜವಾಬ್ದಾರಿಯಾಗಿದೆ ಕಾಮಗಾರಿಯಲ್ಲಿ ಕಳಪೆ ಕಂಡುಬಂದರೇ ಕೂಡಲೇ ನನಗೆ ಮಾಹಿತಿ ನೀಡಬೇಕು. ಕಾಮಗಾರಿಯನ್ನು ಗುಣಮಟ್ಟದಿಂದ ನಡೆಸಲು ನಾನು ಸೂಚನೆ ನೀಡುತ್ತೇನೆ. ಇನ್ನೂ ಕ್ಷೇತ್ರದ ಜನರ ಸಮಸ್ಯೆಗಳನ್ನು ತೀರಿಸಲು ನಾನು ಸದಾ ಸಿದ್ದನಾಗಿರುತ್ತೇನೆ ಎಂದರು. ಈ ಸಮಯದಲ್ಲಿ ಸಣ್ಣ ನೀರಾವರಿ ಇಲಾಖೆಯ ಇಂಜನೀಯರ್ ಸುನೀಲ್, ಮುಖಂಡರಾದ ಆದಿರೆಡ್ಡಿ, ಆನಂದರೆಡ್ಡಿ, ಮಂಜುನಾಥ, ದಪ್ಪರ್ತಿ ನಂಜುಂಡ, ಹಳೇಗುಡಿಬಂಡೆ ಮಂಜುನಾಥ, ನಾರಾಯಣಸ್ವಾಮಿ ಸೇರಿದಂತೆ ಹಲವರು ಇದ್ದರು.