School Day Event – ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಶಾಲೆಯಿಂದ ಬಂದ ಕೂಡಲೇ ಅವರು ಶಾಲೆಯಲ್ಲಿ ಏನು ಓದಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸಬೇಕು. ಆಗ ಮಕ್ಕಳ ಶೈಕ್ಷಣಿಕ ಪರಿಸ್ಥಿತಿ ಹೇಗಿರುತ್ತದೆ ಎಂಬುದು ತಿಳಿಯುತ್ತದೆ ಎಂದು ಪ್ರಜಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬೈರಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಚೆಂಡೂರು ಕ್ರಾಸ್ ಬಳಿಯಿರುವ ಪ್ರಜಾ ವಿದ್ಯಾ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದವರು.
ಇತ್ತೀಚಿಗೆ ಪೋಷಕರು ತಮ್ಮ ಮಕ್ಕಳು ಹೇಗೆ ಓದುತ್ತಿದ್ದಾರೆ ಎಂಬುದನ್ನುಗಮನಿಸುತ್ತಿಲ್ಲ. ಪೋಷಕರು ಅವರದ್ದೇ ಆದ ಕೆಲಸಗಳಲ್ಲಿ ಬ್ಯುಸಿಯಾಗಿ ಬಿಡುತ್ತಾರೆ. ಇದರಿಂದಾಗಿ ತಮ್ಮ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳು ಹೇಗೆ ಓದುತ್ತಾರೆ, ಶಾಲೆಯಲ್ಲಿ ಏನೆಲ್ಲಾ ಹೋಂ ವರ್ಕ್ ಕೊಟ್ಟಿದ್ದಾರೆ ಎಂಬುದನ್ನು ಮಗು ಮನೆಗೆ ಬಂದ ಕೂಡಲೇ ಕೇಳಬೇಕು. ಜೊತೆಗೆ ಮಕ್ಕಳಿಗೆ ಮೊಬೈಲ್ ಗಳನ್ನು ನೀಡಬಾರದು. ಪ್ರಜಾ ವಿದ್ಯಾ ಸಂಸ್ಥೆ ಖಾಸಗಿ ಶಾಲೆಯಾದರೂ ಸಹ ಬೇರೆ ಶಾಲೆಗಳಿಂದ ಕಡಿಮೆ ವೆಚ್ಚದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದೆ. ಈ ಶಾಲೆಯ ಮುಖ್ಯ ಉದ್ದೇಶ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಮಾತ್ರ, ಯಾವುದೇ ರೀತಿಯ ಹಣ ಮಾಡುವು ಉದ್ದೇಶ ಹೊಂದಿಲ್ಲ. ಶಾಲೆಯನ್ನು ಮಾಜಿ ಶಾಸಕರಾದ ದಿವಂಗತ ಜಿ.ವಿ.ಶ್ರೀರಾಮರೆಡ್ಡಿಯವರು ಸ್ಥಾಪಿಸಿದ್ದು, ಇದೇ ಉದ್ದೇಶದಿಂದ ಎಂದರು.
ನಂತರ ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳೂ ಸಹ ಇಂದು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಬೇಸರಗೊಳ್ಳಬಾರದು. ಆ ಬೇಸರವನ್ನು ಬದಿಗಿಟ್ಟು ಛಲದಿಂದ ಓದಬೇಕು. ಆಗ ತಾವು ಅಂದುಕೊಂಡ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ನಾನು ಸಹ ಅದೇ ರೀತಿಯಲ್ಲಿ ಓದಿ ಬೆಳೆದವನು. ಮುಂದಿನ ದಿನಗಳಲ್ಲಿ ನೀವೂ ಸಹ ಕಡಿಮೆ ಅಂಕ ಬಂದರೇ ನನ್ನ ಕೈಯಲ್ಲಿ ಓದಲು ಆಗೊಲ್ಲ ಎಂದು ಎದೆಗುಂದದೇ ಶಿಕ್ಷಕರ ಮಾರ್ಗದರ್ಶನ ಪಡೆದು ಒಳ್ಳೆಯ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ಸಮಯದಲ್ಲಿ ಇತ್ತೀಚಿಗೆ ತೆರೆಕಂಡ ಲವ್ ರೆಡ್ಡಿ ಎಂಬ ಸಿನೆಮಾದ ನಾಯಕ ಅಂಜನ್ ರಾಮಚಂದ್ರರೆಡ್ಡಿ ಮಾತನಾಡಿ, ನಾನು ಇದೇ ಭಾಗದಲ್ಲಿ ಬೆಳೆದವನು. ಇದು ಹೋರಾಟಗಳ ಬೀಡು. ಮಾಜಿ ಶಾಸಕರಾದ ದಿವಂಗತ ಜಿ.ವಿ.ಶ್ರೀರಾಮರೆಡ್ಡಿಯವರು ಸ್ಥಾಪನೆ ಮಾಡಿದ ಶಾಲೆಯಲ್ಲಿ ಓದುತ್ತಿರುವ ನೀವುಗಳು ಅವರಂತೆ ಹೋರಾಟದ ಗುಣಗಳನ್ನು, ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳಬೇಕು. ಬಡವರ ಸಮಸ್ಯೆ ಎಂದ ಕೂಡಲೇ ಅವರು ಎಲ್ಲಿಗೆ ಬೇಕಾದರೂ ಹೋಗುತ್ತಿದ್ದರು. ಅವರನ್ನು ಕಳೆದುಕೊಂಡಿರುವುದು ಈ ಭಾಗಕ್ಕೆ ತುಂಬಾ ನಷ್ಟ ಎಂದೇ ಭಾವಿಸುತ್ತೇನೆ. ನಿಮ್ಮಲ್ಲಿ ಅಪಾರವಾದ ಪ್ರತಿಭೆಯಿರುತ್ತದೆ. ನೀವುಗಳು ಅದನ್ನು ಹೊರತೆಗೆಯುವ ಕೆಲಸ ಮಾಡಬೇಕು. ಆಗ ನಿಮ್ಮ ಅಭಿರುಚಿಗೆ ತಕ್ಕಂತೆ ಸಾಧನೆ ಮಾಡಲು ಸಾಧ್ಯವೆಂದರು.
ಶಾಲಾ ವಾರ್ಷಿಕೋತ್ಸವದಲ್ಲಿ ಶಾಲೆಯ ಮಕ್ಕಳು ವಿವಿಧ ಹಾಡುಗಳಿಗೆ ನೃತ್ಯ ರೂಪಕಗಳನ್ನು ಪ್ರದರ್ಶನ ಮಾಡಿ ಎಲ್ಲರ ಮನಗೆದ್ದರು. ಈ ವೇಳೆ ಶಾಲೆಯ ಕಾರ್ಯದರ್ಶಿ ಆರ್.ಎನ್.ರಾಜು, ಖಜಾಂಚಿ ಮಧು, ಶಾಲೆಯ ಸದಸ್ಯರಾದ ಮುನಿವೆಂಕಟಪ್ಪ, ಗೊಪಾಲಕೃಷ್ಣ, ಕೆ.ವಿ.ಅಶೋಕ್, ಪ್ರಜಾ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಮಂಜುಳಾ ಸೇರಿದಂತೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.