Local News: ಇತ್ತೀಚಿಗೆ ರೈತರು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಸಸ್ಯ ಸಂರಕ್ಷಣಾ ಔಷಧಿಗಳನ್ನು ಶಿಫಾರಸ್ಸಿಗಿಂತ ಹೆಚ್ಚಾಗಿ ಬಳಸುತ್ತಿದ್ದಾರೆ. ಇದರಿಂದ ಅನೇಕ ಸಮಸ್ಯೆಗಳು ಉದ್ಬವಿಸಲಿದ್ದು, ರೈತರು ಕೃಷಿ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಔಷಧಗಳನ್ನು ಬಳಸಬೇಕೆಂದು ಚಿಕ್ಕಬಳ್ಳಾಪುರದ ಉಪಕೃಷಿ ನಿರ್ದೇಶಕಿ ದೀಪ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ವರ್ಲಕೊಂಡ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸಸ್ಯ ಸಂರಕ್ಷಣಾ ಔಷದಿಗಳ ಶಿಫಾರಸ್ಸು ಹಾಗೂ ಅವುಗಳ ಸುರಕ್ಷಿತ ಬಳಕೆ ಬಗ್ಗೆ ಅರಿವು ಮೂಡಿಸುವ ವಿಶೇಷ ಆಂದೋಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಉಪಕೃಷಿ ನಿರ್ದೇಶಕಿ ದೀಪ ಇತ್ತೀಚಿಗೆ ರೈತರು ತಮ್ಮ ಬೆಳೆಗಳಿಗೆ ಹೆಚ್ಚಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾರೆ. ಅದರಲ್ಲೂ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದೇ ಬಳಕೆ ಮಾಡುತ್ತಿದ್ದಾರೆ. ಈ ಕಾರಣದಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆ ಜೊತೆಗೆ ಪರಿಸರವೂ ಸಹ ಹಾಳಾಗುತ್ತದೆ. ಹಣ್ಣು ತರಕಾರಿಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ರಾಸಾಯನಿಕ ಗೊಬ್ಬರಗಳ ಅಂಶ ಕಂಡು ಬರುತಿದೆ. ಇದರಿಂದ ಜನರು ಸಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಕಾರಣದಿಂದ ರೈತರಿಗೆ ಈ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ರೈತರಿಗೆ ಸುರಕ್ಷಿತ ಪೀಡೆನಾಶಕಗಳ ಬಳಕೆ ಬಗ್ಗೆ ತಿಳಿಸಲಾಗುತ್ತಿದೆ ಎಂದರು.
ನಂತರ ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕೃಷಿ ಯಂತ್ರೋಪಕರಣಗಳ ಜೊತೆಗೆ ಕೃಷಿಯನ್ನ ಕೈಗೊಳ್ಳುವ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ. ರೈತರಿಗೆ ತುಂತುರು ನೀರಾವರಿ ಘಟಕಗಳು, ಕೃಷಿ ಯಂತ್ರೋಪಕರಣಗಳು, ಪಿವಿಸಿ ಪೈಪುಗಳು ಹಾಗೂ ಕೃಷಿ ಸಂಸ್ಕರಣಾ ಘಟಕಗಳನ್ನು ಸಹಾಯಧನದಡಿ ವಿತರಣೆ ಮಾಡಲಾಗುತ್ತದೆ. ರೈತರು ಈ ಸೌಲಭ್ಯಗಳನ್ನು ಬಳಸಿಕೊಂಡು ಕೃಷಿಯಲ್ಲಿ ಅಭಿವೃದ್ದಿ ಹೊಂದಬೇಕು ಎಂದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳಾದ ಡಾ.ಪಾಪಿರೆಡ್ಡಿ ಕೃಷಿ ಮತ್ತು ತೋಟಗಾರಿಕೆ ಬೆಳಗಳಲ್ಲಿ ಕಂಡುಬರುವ ರೋಗ ಮತ್ತು ಕೀಟಗಳ ಬಗ್ಗೆ ಮತ್ತು ಅವುಗಳ ಹತೋಟಿ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ನಂತರ ಕೃಷಿಕ ಸಮಾಜದ ಉಪಾಧ್ಯಕ್ಷ ಶ್ರೀ ಎಂ.ಪಿ.ಲಕ್ಷ್ಮೀನಾರಾಯಣರೆಡ್ಡಿ ಆತ್ಮ ಯೋಜನೆಯ ಉಪಯೋಜನಾ ನಿರ್ದೇಶಕ ಸತೀಶ್ ರವರು PMFME ಯೋಜನೆ ಕುರಿತು ಮಾಹಿತಿ ನೀಡಿದರು. ಇದೇ ಸಮಯದಲ್ಲಿ ಬಾಯರ್ ಸಂಸ್ಥೆಯ ಪ್ರತಿನಿಧಿಗಳಾದ ವರದರಾಜು ರವರು ಸಸ್ಯ ಸಂರಕ್ಷಣಾ ಔಷದಿಗಳನ್ನು ಬಳಸುವಾಗ ತೆಗೆದುಕೊಳ್ಳಬೇಕಾದ ಮುನ್ನಚರಿಕೆ ಕ್ರಮಗಳನ್ನು ಪ್ರಾತ್ಯಕ್ಷಿಕೆ ಮುಖಾಂತರ ತಿಳಿಸಿಕೊಟ್ಟರು.
ಈ ವೇಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬಾಬು, ಸೋಮೇನಹಳ್ಳಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಪಾಪಣ್ಣ, ಆತ್ಮ ಯೋಜನೆಯ ಜಯಣ್ಣ, ಜ್ಯೋತಿ, ಕೃಷಿ ಇಲಾಖೆಯ ಸಿಬ್ಬಂದಿಯಾದ ರಾಜ್ ಕುಮಾರ್, ಮಂಜುನಾಥರೆಡ್ಡಿ ಪ್ರಗತಿಪರ ರೈತರು, ರೈತ ಮಹಿಳೆಯರು ಸೇರಿದಂತೆ ಹಲವರು ಇದ್ದರು.