Karnataka Suddi : ಕಳೆದ ಸಂಕ್ರಾಂತಿ ಹಬ್ಬದ ಸಮಯದಲ್ಲೇ ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ನಡೆದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕ್ರೂರ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ಈ ಹೇಯ ಕೃತ್ಯ ನಡೆದಿದ್ದು, ನವೀನ್ ಎಂಬುವವರಿಗೆ ಸೇರಿದ ಕರು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದು, ಈ ವೇಳೆ ಯಾರೋ ಪಾಪಿಗಳು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರು ರಕ್ತದ ಮಡುವಿನಲ್ಲಿ ಒದ್ದಾಡಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದ ನವೀನ್ ಎಂಬುವವರಿಗೆ ಸೇರಿದ ಕರು ದನದ ಕೊಟ್ಟಿಗೆಯಲ್ಲಿರುವಾಗ ಮಚ್ಚಿನಿಂದ ಕರುವಿನ ಮೇಲೆ ಧಾಳಿ ನಡೆಸಲಾಗಿದೆ. ಈ ಹಿಂದೆ ಸಹ ನವೀನ್ ರವರಿಗೆ ಸೇರಿದ ಜಾನುವಾರುಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದರು. ಅದೇ ರೀತಿ ಇದೀಗ ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರು ಮೇಲೆ ಮಚ್ಚಿನಿಂದ ಕೊಚ್ಚಿ ಹಲ್ಲೆ ಮಾಡಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯದಿಂದ ಕರು ರಕ್ತದ ಮಡುವಿನಲ್ಲಿ ನರಳಾಡುವಂತಾಗಿದೆ. ಗಾಯಗೊಂಡ ಕರುವಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಇನ್ನೂ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆಯಲಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕ್ರೂರ ಕೃತ್ಯ ನಡೆದಿದೆ. ಅದೇ ರೀತಿ ಮೈಸೂರಿನಲ್ಲಿ ಕೆಲ ಕಿಡಿಗೇಡಿಗಳು ಹಸುವಿನ ಬಾಲಕ್ಕೆ ಮಚ್ಚು ಹೊಡೆದು ಗಾಯುಗೊಳಿಸಿರುವ ಪ್ರಕರಣ ಬೆಳಿಕಿಗೆ ಬಂದಿತ್ತು. ಅದೇ ಮಾದರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಗರ್ಭ ಧರಿಸಿದ ಹಸುವಿನ ತಲೆ ಕಡೆದು ದೇಹ ತೆಗೆದುಕೊಂಡು ಹೋಗಿದ್ದರು. ಜಮೀನು, ಕಾಡಿಗೆ ಮೇಯಲು ಹೋದಂತಹ ಜಾನುವಾರುಗಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಮಾಂಸ ತೆಗೆದುಕೊಂಡು ಹೋಗುತ್ತಾರೆ ಎಂಬ ಆರೋಪಗಳು ಸಹ ಕೇಳಿಬರುತ್ತಲೇ ಇದೆ.

ಈ ಮೊದಲು ರಾಸುಗಳ ಮೇಲೆ ಹುಲಿ, ಸಿಂಹ ಸೇರಿದಂತೆ ಹಲವು ಕಾಡು ಪ್ರಾಣಿಗಳು ದಾಳಿ ಮಾಡುವ ಪ್ರಕರಣಗಳು ನಡೆಯುತ್ತಿತ್ತು. ಆದರೆ ಇದೀಗ ಮನುಷ್ಯರೇ ಕಾಡು ಪ್ರಾಣಿಗಳಿಗಿಂತ ಕ್ರೂರವಾಗಿ ಜಾನುವಾರುಗಳ ಮೇಲೆ ಧಾಳಿ ನಡೆಸುತ್ತಿದ್ದಾರೆ. ಮನುಷ್ಯರಿಗೆ ಹಲವು ರೀತಿಯಲ್ಲಿ ಉಪಯುಕ್ತವಾಗಿರುವಂತಹ ಜಾನುವಾರುಗಳ ಮೇಲೆ ಈ ರೀತಿಯ ಕ್ರೌರ್ಯ ಮೆರೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಬುದ್ದರ ಅಭಿಪ್ರಾಯವಾಗಿದೆ.