Kaiwara Tataiah – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಯೋಗಿನಾರೇಯಣ ಯತೀಂದ್ರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನಾಗಮಣಿ ಮಾತನಾಡಿ, ಮಹಾನ್ ಚೇತನರಲ್ಲಿ ಕೈವಾರ ತಾತಯ್ಯ ನವರು ಸಹ ಒಬ್ಬರು. ಅವರ ಜಯಂತಿಯನ್ನು ಆಚರಿಸುವುದು ನಮ್ಮೆಲ್ಲರ ಪುಣ್ಯ, ನಮ್ಮ ಜಿಲ್ಲೆಯಲ್ಲಿ ಜನಿಸಿದಂತಹ ಯೋಗಿನಾರೇಯಣ ಯತೀಂದ್ರರು ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ. ಎಲ್ಲ ಸಮುದಾಯದವರಿಗೂ ಅವರು ಸಲ್ಲುತ್ತಾರೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ತೀಡುವಂತಹ ವಚನಗಳನ್ನು ರಚಿಸಿದ್ದಾರೆ. ಸಮಾಜ ಸುಧಾಕರರ ವಚನಗಳು ಕಾಲೇಜು, ಶಾಲೆಗಳಲ್ಲಿ ತಿಳಿಸುವಂತಹ ಕೆಲಸ ಮಾಡಬೇಕು. ಸೋಷಿಯಲ್ ಮಿಡಿಯಾಗಳಲ್ಲಿ ಬ್ಯುಸಿಯಾಗಿರುವ ಮಕ್ಕಳಿಗೆ ಈ ರೀತಿಯ ವಚನಗಳು, ಸಮಾಜ ಸುಧಾಕರ ಬಗ್ಗೆ ತಿಳಿಸಿಕೊಡುವ ಕೆಲಸ ನಾವೆಲ್ಲರೂ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬಲಿಜ ಮುಖಂಡ ದ್ವಾರಕಾನಾಥ್ ನಾಯ್ಡು ಮಾತನಾಡಿ, ನಮ್ಮ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿಯಬೇಕು. ಶಿಕ್ಷಣದಲ್ಲಿ ಕೊಂಚ ಮುಂದೆ ಇದ್ದರೂ ನಾವು ರಾಜಕೀಯವಾಗಿ ಮುಂದೆ ಬರಬೇಕು. ಜೊತೆಗೆ ಸರ್ಕಾರ ಇಲಾಖೆಯ ಅಧಿಕಾರಿಗಳು ಸಹ ಸಮುದಾಯದವರಿಗೆ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಬಿಇಓ ಕೃಷ್ಣಪ್ಪ, ಬಲಿಜ ಸಂಘದ ಕಾರ್ಯದರ್ಶಿ ಶ್ರೀನಿವಾಸ ನಾಯ್ಡು ಸೇರಿದಂತೆ ಹಲವರು ಮಾತನಾಡಿದರು. ಬಲಿಜ ಸಮುದಾಯದ ವಿದ್ಯಾರ್ಥಿ ನಿಲಯಕ್ಕೆ ಜಮೀನು ಮಂಜೂರು ಮಾಡಲು ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಪ.ಪಂ ಅಧ್ಯಕ್ಷ ವಿಕಾಸ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಬಲಿಜ ಸಂಘದ ಅಧ್ಯಕ್ಷ ವೆಂಕಟರಾಯಪ್ಪ, ಸೇರಿದಂತೆ ಹಲವರು ಇದ್ದರು.