Insta Love – ವಿವಾಹೇತರ ಸಂಬಂಧಗಳ ಕಾರಣದಿಂದ ಅದೆಷ್ಟು ಕುಟುಂಬಗಳು ನಾಶವಾಗಿದೆ. ಅದೇ ರೀತಿಯಲ್ಲಿ ಮದುವೆಯಾದ ಮಹಿಳೆಯೊಬ್ಬರು ಇನ್ಸ್ಟಾಗ್ರಾಂ ಮೂಲಕ ಹುಟ್ಟಿದ ಪ್ರೀತಿಗಾಗಿ ಗಂಡನನ್ನು ಬಿಟ್ಟು ಬಂದಿದ್ದಾಳೆ. ಗಂಡನ ಬಿಟ್ಟು ಬಾಡಿಗೆ ಮನೆಯಲ್ಲಿ ವಾಸವಿದ್ದಾಳೆ. ಪತಿಯನ್ನು ಬಿಟ್ಟ ಒಂದು ವರ್ಷದ ಬಳಿಕ ಅದೇ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದ್ದು, ಆಕೆಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ.
ಅಂದಹಾಗೆ ಈ ಘಟನೆ ಕರ್ನಾಟಕದ ಧಾರವಾಡದ ಶ್ರೀನಗರ 1ನೇ ಕ್ರಾಸ್ ನ ಮನೆಯಲ್ಲಿ. ಮೃತ ದುರ್ದೈವಿಯನ್ನು ಶ್ವೇತಾ ಗುದಗಾಪುರ (24) ಎಂದು ಗುರ್ತಿಸಲಾಗಿದೆ. ಮೂಲತಃ ರಾಮದುರ್ಗದ ಶ್ವೇತಾ ತನ್ನ ಪತಿಯನ್ನು ಬಿಟ್ಟು ಧಾರವಾಡಕ್ಕೆ ಬಂದು ಕಳೆದ ಒಂದು ವರ್ಷದಿಂದ ವಾಸವಿದ್ದಾಳೆ. ರಾಮದುರ್ಗದ ವಿಶ್ವನಾಥ್ ಎಂಬಾತನೊಂದಿಗೆ ಐದು ವರ್ಷದ ಹಿಂದೆ ಶ್ವೇತಾಳ ವಿವಾಹವಾಗಿತ್ತು. ಆದರೆ ಎರಡು ವರ್ಷದಿಂದ ಶ್ವೇತಾ ತನ್ನ ಪತಿಯಿಂದ ದೂರವಿದ್ದಳು. ಈ ಸಮಯದಲ್ಲಿ ಶ್ವೇತಾ ಇನ್ಸ್ಟಾಗ್ರಾಂ ಮೂಲಕ ಯುವಕನೊಂದಿಗೆ ಪ್ರೀತಿಗೆ ಬಿದ್ದಿದ್ದಳು ಎನ್ನಲಾಗಿದೆ.
ಮೃತ ಶ್ವೇತಾಗೆ ಧಾರವಾಡ ಮೂಲದ ಯುವಕನೊಬ್ಬ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಾನೆ. ಈ ಪರಿಚಯ ಪ್ರೀತಿಯಾಗಿ ಬದಲಾಗಿತ್ತು ಎನ್ನಲಾಗಿದೆ. ನಂತರ ಪತಿಗೆ ವಿಚ್ಚೇದನಕ್ಕಾಗಿ ನೊಟೀಸ್ ಸಹ ಕಳುಹಿಸಿದ್ದಳಂತೆ. ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಯುವಕನನ್ನು ನಂಬಿ ಪತಿಯನ್ನು ಬಿಟ್ಟು ಬಂದ ಶ್ವೇತಾ ಧಾರವಾಡದ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಳಂತೆ. ಸ್ಪರ್ಧಾತ್ಮಕ ಪರೀಕ್ಷೆಗೆ ಓದಿಕೊಳ್ಳಲು ಬಾಡಿಗೆ ಮನೆಯಲ್ಲಿ ಇರೋದಾಗಿ ಹೇಳಲಾಗಿದೆ. ಇನ್ನೂ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.