2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (HSRP) ಅಳವಡಿಕೆಗೆ ಸೆ.15 ರಂದು ಕೊನೆಯ ದಿನಾಂಕವಾಗಿದ್ದು, ಈ ಬಾರಿ ಮತ್ತೆ ಅವಧಿ ಮುಂದುವರೆಸುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಲವು ಬಾರಿ HSRP ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆಯಾಗುತ್ತಾ ಬಂದಿತ್ತು. ಇದೀಗ ಸೆ.15 ಕೊನೆಯ ದಿನಾಂಕವಾಗಿದ್ದು, ಒಂದು ವೇಳೆ ಇನ್ನೂ ನಿಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಿಸದೇ ಇರುವಂತಹವರು ದಂಡ ಪಾವತಿಸಬೇಕಾಗುತ್ತದೆ.
ಈ ಹಿಂದೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು HSRP ನಂಬರ್ ಪ್ಲೇಟ್ ಸೆಪ್ಟೆಂಬರ್ 15ರ ವರೆಗೆ ಅವಕಾಶ ನೀಡಲಾಗಿದೆ. ಆದರೆ ಸೆಪ್ಟೆಂಬರ್ 16ರಿಂದ ದುಬಾರಿ ದಂಡ ವಿಧಿಸಲಾಗುತ್ತಿದೆ ಎಂದು ಹೇಳಿದ್ದರು. ಇದೀಗ ಆ ಅವಧಿ ಹತ್ತಿರವಿದೆ. ರಾಜ್ಯದಲ್ಲಿ ಒಟ್ಟಾರೆಯಾಗಿ 2 ಕೋಟಿಯಷ್ಟು ವಾಹನಗಳಿವೆ. ಈ ಪೈಕಿ ಕೇವಲ 51 ಲಕ್ಷ ವಾಹನಗಳು ಮಾತ್ರ HSRP ನಂಬರ್ ಪ್ಲೇಟ್ ಅಳವಡಿಸಿದೆ. ಉಳಿದ ವಾಹನಗಳು ಇನ್ನೂ HSRP ನಂಬರ್ ಪ್ಲೇಟ್ ಗಳನ್ನು ಹಾಕಿಸಿಲ್ಲ. ಈ ಹಿನ್ನೆಲೆಯಲ್ಲಿ ನಂಬರ್ ಪ್ಲೇಟ್ ಹಾಕಿಸದೇ ಇರುವಂತಹ ವಾಹನಗಳಿಗೆ ದಂಡ ವಿಧಿಸಲು ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಸ್ಫೇಷಲ್ ಡ್ರೈವ್ ನಡೆಸಿ 500 ರೂಪಾಯಿ ದಂಡ ಹಾಕುತ್ತೇವೆ. ಮೊದಲ ಬಾರಿಗೆ 500 ರೂಪಾಯಿ, ಎರಡನೇ ಬಾರಿಗೆ 1000 ದಂಡ ವಿಧಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಏಕ ಮಾದರಿಯ ನಂಬರ್ ಪ್ಲೇಟ್ ಇರಬೇಕೆಂಬ ದೃಷ್ಟಿಯಿಂದ ಹಾಗೂ ಅಪರಾಧ ಕೃತ್ಯಗಳ ಬಗ್ಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ನಿಂದ ಸುಲಭವಾಗಿ ಮಾಹಿತಿ ಪಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ HSRP ನಂಬರ್ ಪ್ಲೇಟ್ ಅಳವಡಿಸುವುದನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಸದ್ಯ ಜನರು ತಮ್ಮ ವಾಹನಗಳಿಗೆ ಈ ನಂಬರ್ ಪ್ಲೇಟ್ ಹಾಕಿಸಲು ಹರಸಾಹಸ ಪಡುತ್ತಿದ್ದಾರೆ. ಇಷ್ಟು ದಿನ ಸುಮ್ಮನಿದ್ದು, ಇದೀಗ ಆನ್ ಲೈನ್ ನಲ್ಲಿ ನಂಬರ್ ಪ್ಲೇಟ್ ಬುಕ್ ಮಾಡೋಕೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನೂ ಕೇವಲ ಒಂದು ವಾರ ಮಾತ್ರ HSRP ನಂಬರ್ ಪ್ಲೇಟ್ ಹಾಕಿಸಲು ಅವಕಾಶವಿದ್ದು, ಅಷ್ಟರೊಳಗೆ ನಂಬರ್ ಪ್ಲೇಟ್ ಹಾಕಿಸದೇ ಇದ್ದರೇ ದಂಡ ಪಾವತಿಸುವುದು ಕಡ್ಡಾಯವಾಗಿದೆ.
HSRP ನಂಬರ್ ಪ್ಲೇಟ್ ಎಂದರೇನು?
2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಈ ನಂಬರ ಪ್ಲೇಟ್ ಗಳು ಅಲ್ಯುಮಿನಿಯಂ ಲೋಹದಿಂದ ತಯಾರಿಸಲಾಗುತ್ತದೆ. ಹೊಸ ವಾಹನಗಳಲ್ಲಿ ಈಗಾಗಲೇ ಈ ಮಾದರಿಯ ನಂಬರ್ ಪ್ಲೇಟ್ ಗಳನ್ನು ಅಳವಡಿಸಲಾಗುತ್ತಿದೆ. ಈ ನಂಬರ್ ಪ್ಲೇಟ್ ಗಳಲ್ಲಿ ನಂಬರ್ ಗಳು ಉಬ್ಬಿಕೊಂಡಿರುವ ಮಾದರಿಯಲ್ಲಿ ಮುದ್ರಣವಾಗಿರುತ್ತದೆ. ನಂಬರ್ ಪ್ಲೇಟ್ ನ ಮೇಲ್ಬಾಗದ ಎಡಬದಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆಯನ್ನು ಕಾಣಬಹುದಾಗಿದೆ. 20 ಮಿ.ಮೀಟರ್ ಉದ್ದಗಲದ ಈ ಮುದ್ರೆಯನ್ನು ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗುತ್ತದೆ.