ಗುಡಿಬಂಡೆ: ತಾಲೂಕಿನಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಬಿದ್ದಿದ್ದು, ರೈತರು ಮುಂಗಾರು ಕೃಷಿ ಚಟುವಟಿಕೆಗಳಲ್ಲಿ ಮುಂದಾಗಿದ್ದಾರೆ. ಜೊತೆಗೆ ಕೃಷಿ ಇಲಾಖೆ ಸಹ ಈ ಬಗ್ಗೆ ಸಮರ್ಪಕ ಸಿದ್ದತೆಗಳನ್ನು ಮಾಡಿಕೊಂಡಿದೆ. ಬಿತ್ತನೆ ಬೀಜಗಳ ದಾಸ್ತಾನು ಸೇರಿದಂತೆ ರೈತರಿಗೆ ಬೇಕಾಗುವಂತಹ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಕೃಷಿ ಅಧಿಕಾರಿ ಶಂಕರಯ್ಯ ತಿಳಿಸಿದ್ದಾರೆ.
ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಭೂಮಿಯನ್ನು ಹಸನು ಮಾಡಿಕೊಂಡು ಬಿತ್ತನೆಗೆ ಸಿದ್ದವಾಗುತ್ತಿದ್ದಾರೆ. ಕಳೆದ ವರ್ಷ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಬರಗಾಲ ಪೀಡಿತ ಪ್ರದೇಶ ಎಂತಲೂ ಘೋಷಣೆ ಮಾಡಲಾಯಿತು. ಇದೀಗ ಹಂತ ಹಂತವಾಗಿ ರೈತರಿಗೆ ಬರ ಪರಿಹಾರದ ಹಣ ಸಹ ಜಮೆ ಆಗುತ್ತಿದೆ. ಜೊತೆಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ನೊಂದಣಿಯಾದ ರೈತರಿಗೆ ವಿಮೆ ಪರಿಹಾರ ಸಹ ಜಮೆ ಯಾಗುತ್ತಿದೆ. ಸದ್ಯ ಈ ಬಾರಿ ಮುಂಗಾರು ಆರಂಭಕ್ಕೂ ಮುಂಚೆಯೇ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ.
ಇನ್ನೂ ಕೃಷಿ ಇಲಾಖೆಯ ವತಿಯಿಂದ ಮುಂಗಾರು ಹಂಗಾಮಿಗೆ ರೈತರಿಗೆ ರಿಯಾಯತಿ ದರದಲ್ಲಿ ಬಿತ್ತನೆ ಬೀಜಗಳ ವಿತರಣೆಯ ಬಗ್ಗೆ ಕೃಷಿ ಅಧಿಕಾರಿ ಶಂಕರಯ್ಯ ಮಾಹಿತಿ ನೀಡಿದ್ದಾರೆ. ಈ ಬಾರಿ ಅವಧಿಗೂ ಮುಂಚೆ ಮುಂಗಾರು ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಕೃಷಿ ಇಲಾಖೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಗೂ ರಿಯಾಯತಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತದೆ. ತಾಲೂಕಿನ ಗುರಿಗೆ ಅನುಗುಣವಾಗಿ ಈಗಾಗಲೇ ಬಿತ್ತನೆ ಬೀಜಗಳು ಸಹ ಪೂರೈಕೆಯಾಗುತ್ತಿವೆ. ಜೊತೆಗೆ ರಸಗೊಬ್ಬರಗಳೂ ಸಹ ದಾಸ್ತಾನಾಗಿದೆ. ರಸಗೊಬ್ಬರ ಗಳ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕೆಂದು ರಸಗೊಬ್ಬರ ಮಾರಾಟಗಾರರಿಗೆ ಸೂಚನೆ ಸಹ ನೀಡಲಾಗಿದೆ ಎಂದರು.
ಈಗಾಗಲೇ ಬಿತ್ತನೆ ಬೀಜಗಳನ್ನು ಹೆಬ್ಬಾಳದ ಬೀಜ ಪರೀಕ್ಷೆ ಪ್ರಯೋಗಾಲಯದಲ್ಲಿ ಮಾದರಿಯನ್ನು ಕಳುಹಿಸಿ ಗುಣಮಟ್ಟದ ಪ್ರಮಾಣ ಪರೀಕ್ಷೆ ಮಾಡಿಸಲಾಗಿದೆ. ಪರೀಕ್ಷೆಯಲ್ಲಿ ಬಂದ ವರದಿಯಂತೆ ಗುಣಮಟ್ಟದ ಬೀಜಗಳನ್ನು ಮಾತ್ರ ರೈತರಿಗೆ ಪೂರೈಕೆ ಮಾಡಲಾಗುತ್ತದೆ. ಒಂದು ವೇಳೆ ಕಳಪೆ ಗುಣಮಟ್ಟ ಬೀಜಗಳು ಕಂಡುಬಂದರೇ ಆ ದಾಸ್ತಾನು ವಾಪಸ್ಸು ಕಳುಹಿಸಿ ಬೇರೆ ದಾಸ್ತಾನು ತರಿಸಿಕೊಡಲಾಗುತ್ತದೆ ಎಂದರು.
ಇನ್ನೂ ಈ ಬಾರಿ ಬರಪರಿಹಾರದ ಮೊತ್ತ 4.51 ಲಕ್ಷದಷ್ಟು ರೈತರ ಖಾತೆಗೆ ಜಮೆಯಾಗಿದೆ. ಉಳಿದ ರೈತರಿಗೂ ಹಂತಹಂತವಾಗಿ ಪರಿಹಾರ ಜಮೆಯಾಗಲಿದೆ. ಈ ಬಾರಿಯೂ ಸಹ ರೈತರು ಮುನ್ನೆಚ್ಚರಿಕೆ ಕ್ರಮವಾಗಿ ತಪ್ಪದೇ ಕಡ್ಡಾಯವಾಗಿ ಹವಾಮಾನ ಆಧಾರಿತ ಬೆಳೆ ವಿಮೆ ಅಂದರೇ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ನೊಂದಾಯಿಸಿಕೊಳ್ಳಬೇಕು. ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯಾದರೇ ವಿಮೆಯನ್ನು ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬ ರೈತ ತಪ್ಪದೇ ಬೆಳೆ ವಿಮೆ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.