...
HomeStateಗುಡಿಬಂಡೆ ಸರ್ವಧರ್ಮ ಗಾಯತ್ರಿ ವಿಶ್ವಧ್ಯಾನ ಮಂದಿರ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಶಾಸಕ ಸುಬ್ಬಾರೆಡ್ಡಿ 25 ಲಕ್ಷ...

ಗುಡಿಬಂಡೆ ಸರ್ವಧರ್ಮ ಗಾಯತ್ರಿ ವಿಶ್ವಧ್ಯಾನ ಮಂದಿರ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಶಾಸಕ ಸುಬ್ಬಾರೆಡ್ಡಿ 25 ಲಕ್ಷ ಕೊಡುಗೆ ಘೋಷಣೆ

ಗುಡಿಬಂಡೆ:  ಗಾಯತ್ರಿ ದೇಗುಲ ಸಮಿತಿ ಮೂಲಕ ಬೆಟ್ಟದ ತಪ್ಪಲಿನಲ್ಲಿ ಅಗಣಿತ ಭಕ್ತರ ನೆರವಿನಿಂದ ನಿರ್ಮಾಣಗೊಳ್ಳುತ್ತಿರುವ ಸರ್ವಧರ್ಮ ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರ ನಿರ್ಮಾಣ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಾಮಗಾರಿ ಸುಗಮವಾಗಿ ನೆರವೇರುತ್ತಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಈ ಮಹತ್ವದ ಸಾರ್ವಜನಿಕ ಯೋಜನೆ ಸಾಕಾರಗೊಳ್ಳಲು 25 ಲಕ್ಷ ರೂಗಳ ವೈಯಕ್ತಿಕ ನೆರವು ನೀಡುತ್ತಿರುವುದಾಗಿ ಘೋಷಿಸಿದರು.

ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಬಹುದಾದ ಸಾಮಾಜಿಕ ಕಳಕಳಿಯುಳ್ಳ ಯೋಜನೆಗಳನ್ನು ಗಾಯತ್ರಿ ದೇಗುಲ ಸಮಿತಿ ಸಾರ್ವಜನಿಕರ ದಾನಿಗಳ ಸಹಕಾರದೊಂದಿಗೆ ಅನುಷ್ಟಾನಗೊಳಿಸಲು ಹೊರಟಿರುವುದು ಶ್ಲಾಘನೀಯ ಅಂಶವಾಗಿದೆ. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಗಾಯತ್ರಿ ವಿಶ್ವಧ್ಯಾನ ಮಂದಿರ ಕಾಮಗಾರಿ ಪೂರ್ಣಗೊಳ್ಳಲು ಅಗತ್ಯವಿರುವ ಆರ್ಥಿಕ ನೆರವನ್ನು ತಾವು ವೈಯಕ್ತಿಕವಾಗಿ  ಹಾಗೂ ವಿವಿಧ ದಾನಿಗಳ ಮೂಲಕ ಸಂಗ್ರಹಿಸಿ ಕೊಡಲಾಗುವುದು ಜೊತೆಗೆ ಸರ್ಕಾರದಿಂದ ಸಹಾ ದೊರೆಯಬಹುದಾದ ಅನುದಾನವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದರು.

ಬಹುಮುಖ್ಯವಾಗಿ ಬೆಟ್ಟದಿಂದ ಹರಿದು ಹೋಗುವ ಮಳೆ ನೀರನ್ನು ಮಳೆಕೊಯ್ಲು ಪದ್ದತಿ ಮೂಲಕ ಈ ಸ್ಥಳದಲ್ಲಿರುವ ಪುರಾತನ ಪುನಶ್ಚೇತನ ಗೊಳಿಸಲಿರುವ ಕಲ್ಯಾಣಿಯಲ್ಲಿ ಸಂಗ್ರಹಿಸಿ, ಸಂಸ್ಕರಿಸಿದ ಶುದ್ಧ ಫ್ಲೋರೈಡ್ ರಹಿತ ಕುಡಿಯುವ ನೀರನ್ನು ಪಟ್ಟಣದ ಜನತೆಗೆ ಒದಗಿಸುವ ರಾಜ್ಯದಲ್ಲಿ ಮಾದರಿ ಎನಿಸಬಹುದಾದ ಯೋಜನೆ ಅನುಷ್ಟಾನಕ್ಕೆ ಒತ್ತುಕೊಡಲು ನಿಶ್ಚಯಿಸಿದ್ದೇನೆ. ಚುನಾವಣಾ ನೀತಿ ಸಂಹಿತೆ ಮುಗಿದ ತಕ್ಷಣಾ ಅಧಿಕಾರಿಗಳ ತಂಡದೊಂದಿಗೆ ಈ ಸ್ಥಳಕ್ಕೆ ಆಗಮಿಸಿ ದೇಗುಲ ಸಮಿತಿ ಇಂಜಿನೀಯರ್‌ಗಳ ಜೊತೆ ಚರ್ಚಿಸಿ ಅವರು ರೂಪಿಸಿರುವ ಯೋಜನೆಯನ್ನು ತಕ್ಷಣಾ ಕೈಗೆತ್ತಿಕೊಳ್ಳುವ ಕುರಿತು ಚರ್ಚಿಸುವುದಾಗಿ ತಿಳಿಸಿದರು.

ಈ ಸ್ಥಳದಲ್ಲಿ ವಿಶ್ವದಲ್ಲಿಯೇ ಅತಿ ಎತ್ತರ ಹಾಗೂ ಮೊದಲು ಎನ್ನಿಸಬಹುದಾದ 24 ಅಡಿ ಗಾಯತ್ರಿದೇವಿ ಶಿಲಾ ವಿಗ್ರಹ ಸ್ಥಾಪನೆಯಾಗಲಿದ್ದು, ಬೃಹತ್ ಶಿಲೆ ಹೊತ್ತುತರಲು ಅಗತ್ಯವಿರುವ ವಾಹನ ಸಂಚಾರಕ್ಕೆ ರಸ್ತೆ ಗುರ್ತಿಸಿ ನಿರ್‍ಮಿಸಿಕೊಡುವುದಾಗಿ ತಿಳಿಸಿದರು. ಬೆಟ್ಟ ಹಾಗೂ ಧ್ಯಾನ ಮಂದಿರ ವೀಕ್ಷಣೆಗಾಗಿ ಆಗಮಿಸುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಪರಿಸರಸ್ನೇಹಿ ಕಾಮಗಾರಿಗಳನ್ನು ಆರಂಭಿಸಲಾಗುವುದು. ರಾಕ್‌ಗಾರ್ಡನ್, ಮಕ್ಕಳ ಪಾರ್ಕು, ವೇದವಿಜ್ಞಾನ ಪಾಠಶಾಲೆ, ಅನ್ನಪೂರ್ಣ ಭವನ ನಿರ್ಮಾಣ ಸೇರಿದಂತೆ ಈ ಸಂಸ್ಥೆಯವರು 14.5 ಕೋಟಿ ಅಂದಾಜು ವೆಚ್ಚದ ಸಾಮಾಜಿನ ಯೋಜನೆಗಳನ್ನು ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ದೊರೆಯಬಹುದಾದ ಅನುದಾನವನ್ನು  ಈ ಸಾಮಾಜಿಕ ಸಹಕಾರ ಯೋಜನೆಗಳಿಗೆ ಕೊಡಸಿಕೊಡುವ ಪ್ರಯತ್ನ ಮಾಡಲಾಗುವುದು. ಕೊಳವೆ ಬಾವಿ, ಶೌಚಾಲಯ ನಿರ್ಮಾಣಕ್ಕೆ ಸಹಾ ಸಹಕಾರ ಒದಗಿಸುಕೊಡುವ ನಿಟ್ಟಿನಲ್ಲಿ ನೀತಿ ಸಂಹಿತೆ ಮುಕ್ತಾಯದ ನಂತರ ಮುಂದಡಿ ಇರಿಸಲಾಗುವುದು. ಒಟ್ಟಾರೆ ಗುಡಿಬಂಡೆಯನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕೆಂಬುದೇ ತಮ್ಮ ಹೆಬ್ಬಯಕೆ ಎಂದು ಶಾಸಕ ಸುಬ್ಬಾರೆಡ್ಡಿ ಈ ಸಂದರ್ಭದಲ್ಲಿ ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಪಪಂ ಉಪಾಧ್ಯಕ್ಷ ವಿಕಾಸ್, ಪಪಂ ಹಿರಿಯ ಸದಸ್ಯ ಇಸ್ಮಾಯಿಲ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಡೇಹಳ್ಳಿ ಆದಿರೆಡ್ಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಣ್ಣ, ತಾಲ್ಲೂಕು ಮುಖಂಡರಾದ ರಘುನಾಥರೆಡ್ಡಿ, ಅಂಬರೀಷ್, ದಪ್ಪರ್ತ್ತಿ ನಂಜುಂಡ, ಜಿ.ವಿ.ಗಂಗಪ್ಪ, ಎಲ್ಲೋಡು ಗಂಗಾಧರಪ್ಪ, ನಾಗರಾಜ, ಹಳೇಗುಡಿಬಂಡೆ ಲಕ್ಷ್ಮೀನಾರಾಯಣ, ಕಡೇಹಳ್ಳಿ ಆನಂದರೆಡ್ಡಿ, ಜೀವಿಕ ನಾರಾಯಣಸ್ವಾಮಿ, ಗಾಯತ್ರಿ ದೇಗುಲ ಸಮಿತಿ ಮುಖ್ಯ ಸಂಚಾಲಕ ಸ.ನ.ನಾಗೇಂದ್ರ, ಸಂಚಾಲಕರಾದ ವಾಹಿನಿ ಸುರೇಶ್, ಮಂಜುನಾಥ ಭಾಗವತ್, ಗು.ನ.ನಾಗೇಂದ್ರ, ಶಂಕರದೀಕ್ಷಿತ್, ಶ್ರೀಶಸಿಂಹಭಟ್, ಕೆ.ರವಿಕುಮಾರ್, ಅನುಷಾ ನಾಗರಾಜ್, ರಾಮಕೃಷ್ಣಪ್ರಸಾದ್, ರವಿಶಾಸ್ತ್ರಿ, ಹೆಚ್.ಜಿ.ಗುರುಪ್ರಸಾದ್, ರಾಯಸಂ ರಾಜಶೇಖರ್ ಇತರರು ಭಾಗವಹಿಸಿದ್ದರು.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

Most Popular

Seraphinite AcceleratorOptimized by Seraphinite Accelerator
Turns on site high speed to be attractive for people and search engines.