Dalith Protest – ಮನೆ, ಭೂಮಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಸಂಸ ವತಿಯಿಂದ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿ ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಅಂತ್ಯಗೊಳಿಸಿದ್ದು, ಒಂದು ತಿಂಗಳ ಒಳಗೆ ಭೇಡಿಕೆ ಈಡೇರಿಸದೇ ಇದ್ದರೇ ಪುನಃ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ದಲಿತ ಮುಖಂಡರು ಎಚ್ಚರಿಕೆ ಸಹ ನೀಡಿದ್ದಾರೆ.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಕಳೆದ 11 ದಿನಗಳಿಂದ ನಡೆಯುತ್ತಿರುವ ದಲಿತ ಸಂಘರ್ಷ ಸಮಿತಿಯ ಅನಿರ್ಧಿಷ್ಟಾವಧಿ ಧರಣಿ ಅಂತ್ಯಗೊಂಡಿದೆ. ಈ ಸಮಯದಲ್ಲಿ ಮಾತನಾಡಿದ ದಸಂಸ ಮುಖಂಡ ಜಿ.ವಿ.ಗಂಗಪ್ಪ ನ್ಯಾಯಸಮ್ಮತವಾದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ನಡೆಸುತ್ತಿದ್ದೆವು. ಜಿಲ್ಲಾಧಿಕಾರಿಗಳು ನಮ್ಮ ಮುಖಂಡರ ಸಭೆ ಕರೆದು ಸಭೆಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಒಂದು ತಿಂಗಳ ಕಾಲಾವಕಾಶ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಧರಣಿಯನ್ನು ಹಿಂಪಡೆಯುತ್ತಿದ್ದೇವೆ. ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸದೇ ಇದ್ದರೇ ಪುನಃ ಎಲ್ಲಾ ಹೋರಾಟಗಾರರು, ಜನರು, ಫಲಾನುಭವಿಗಳು ಜಿಲ್ಲಾ ಕಚೇರಿ ಮುಂಭಾಗ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಇನ್ನೂ ನಮ್ಮ ಪ್ರತಿಭಟನೆಯ ಸಮಯದಲ್ಲಿ ಮೃತಪಟ್ಟ ದಲಿತ ಮುಖಂಡನ ಕುಟುಂಬಕ್ಕೂ ಪರಿಹಾರ ಕೊಡಿಸಲು ಕ್ರಮ ವಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ನಂತರ ದಸಂಸ ತಾಲೂಕು ಸಂಚಾಲಕ ಸಂಚಾಲಕ ಚೆಂಡೂರುರಮಣ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳಿಂದ ಆಗುವಂತಹ ಬೇಡಿಕೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳೇ ಬಗೆಹರಿಸುತ್ತೇವೆಂದು ಅಶ್ವಾಸನೇ ನೀಡಿದ್ದು, ತ್ವರಿತಗತಿಯಲ್ಲಿ ಬೇಡಿಕೆಗಳನ್ನು ಈಡೇರಿಸುವಂತೆ ತಿಳಿಸಿದರು. ಜೊತೆಗೆ ಪೊಲೀಸರು ಸುಖಾಸುಮ್ಮನೆದಲಿತ ಮೇಲೆ ದೂರುಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ತಿರುಗುವಂತೆ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾ ಮಟ್ಟದ ಸಭೆಯಲ್ಲಿ ಪೊಲೀಷ್ ವರಿಷ್ಠಾಧಿಕಾರಿಗಳ ಜತೆಯೂ ಚರ್ಚಿಸಲಾಗಿದೆ. ಅಂತಹ ಪ್ರಕರಣಗಳಿಗೂ ಪರಿಹಾರ ನೀಡುತ್ತೇವೆಂದು ತಿಳಿಸಿದ್ದು, ಅಧಿಕಾರಿಗಳು ತಡಮಾಡದೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಿಳಿಸಿದರು.
ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾ.ಪಂ. ಇಒ ನಾಗಮಣಿ ಹಾಗೂ ಪ.ಪಂ ಮುಖ್ಯಾಧಿಕಾರಿ ಸಭಾ ಶಿರೀನ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವಂತಹ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದರು. ಈ ವೇಳೆ ದಲಿತ ಮುಖಂಡರಾದ ಇಸ್ಕೂಲ್ ನರಸಿಂಹಪ್ಪ, ನರಸಿಂಹಪ್ಪ, ವರ್ಲಕೊಂಡ ರಾಜು, ಆದಿನಾರಾಯಣಪ್ಪ, ಪೇಪರ್ ನಾರಾಯಣಪ್ಪ, ಕೆ.ಎನ್.ನರಸಿಂಹಪ್ಪ ಸೇರಿದಂತೆ ಹಲವರು ಇದ್ದರು.