Crime News- ಪ್ರೀತಿ ಪ್ರೇಮದ ಹೆಸರಲ್ಲಿ ಕೆಲವು ಕಿರಾತಕರು ಕೊಲೆ ಮಾಡುವ ಹಂತಕ್ಕೆ ತಲುಪುತ್ತಾರೆ. ಈಗಾಗಲೇ ಈ ರೀತಿಯ ಅನೇಕ ಘಟನೆಗಳು ನಡೆದಿದೆ. ಇದೀಗ ರಾಯಚೂರಿನಲ್ಲಿ ಅಂತಹುದೇ ಘಟನೆಯೊಂದು ನಡೆದಿದೆ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ಮದುವೆಯಾಗುತ್ತೇನೆ ಎಂದು ಕಾಲೇಜು ವಿದ್ಯಾರ್ಥಿನಿಯ ಬಳಿ ನಿವೇದಿಸಿಕೊಂಡ ಯುವಕನನ್ನು ಯುವತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಯುವಕ ಹಾಡುಹಗಲೇ ನಡುರಸ್ತೆಯಲ್ಲಿ ಯುವತಿಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ರಾಯಚೂರು ಜಿಲ್ಲೆಯ ಸಿಂಧನೂರಿನ ಹೊರ ಭಾಗದಲ್ಲಿ ನಡೆದಿದೆ. ಸಿಂಧನೂರು ಸರ್ಕಾರಿ ಕಾಲೇಜಿನಲ್ಲಿ ಎಂಎಸ್‌ಸಿ ಓದುತ್ತಿದ್ದ ಶಿಫಾ (22) ಮೃತ ದುರ್ದೈವಿ. ಹಾಡಹಗಲೇ ನಡುರಸ್ತೆಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮುಬಿನ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ರಾಯಚೂರು ಜಿಲ್ಲೆ ಲಿಂಗಸೂಗೂರಿನ ವಿದ್ಯಾರ್ಥಿನಿ ಶಿಫಾ ಸಿಂಧನೂರು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಎಂಎಸ್‌ಸಿ ಓದುತ್ತಿದ್ದಳು. ಬೆಳಗ್ಗೆ ಲಿಂಗಸುಗೂರಿನಿಂದ ಸಿಂಧನೂರಿಗೆ ಕಾಲೇಜಿಗೆ ಹೋಗಿದ್ದ ಶಿಫಾ ಳನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಇನ್ನೂ ಶಿಫಾಳನ್ನು ಪರಿಚಯಸ್ಥರೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಸಿಂಧನೂರು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇನ್ನೂ ಈ ಘಟನೆಯ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದು, ವಿದ್ಯಾರ್ಥಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಲಿಂಗಸುಗೂರು ಮೂಲದ ಆರೋಪಿ ಮುಬಿನ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಆರಂಭದಲ್ಲಿ ಕೊಲೆಗೆ ಕಾರಣ ತಿಳಿಯದೇ ಇದ್ದರೂ, ಬಳಿಕ ಕೊಲೆ ಮಾಡಲು ಕಾರಣ ಏನು ಎಂಬುದನ್ನು ಆರೋಪಿ ತಿಳಿಸಿದ್ದಾನೆ. ಶಿಫಾ ನನ್ನನ್ನು ಮದುವೆಯಾಗಲು ನಿರಾಕರಿಸಿದ್ದಳು. ಆದ್ದರಿಂದ ನೀನು ಬೇರೆಯಾರಿಗೂ ಸಿಗಬರಾದು ಎಂದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಗಿ ಪೊಲೀಸರ ವಿಚಾರಣೆಯ ವೇಳೆ ಹೇಳಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.