Bird Flu – ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಹೆಚ್ಚಾಗಿದ್ದು, ಈ ಹಕ್ಕಿ ಜ್ವರ ಹರಡದಂತೆ ಕೋಳಿ ಫಾರಂ ಮಾಲೀಕರು ಸರ್ಕಾರದ ಮಾರ್ಗಸೂಚಿಯಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ ಯಾವುದೇ ಜನರೂ ಸಹ ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ, ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ತಹಸೀಲ್ದಾರ್ ಸಿಗ್ಬತ್ತುಲ್ಲಾ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪಶು ವೈದ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಹಕ್ಕಿ ಜ್ವರದ ಕುರಿತು ಜಾಗೃತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಗ್ರಾಮವೊಂದರಲ್ಲಿ ಮೊದಲ ಹಕ್ಕಿ ಜ್ವರ ಪ್ರಕರಣ ಪತ್ತೆಯಾಗಿದೆ. ಈಗಾಗಲೇ ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಈ ಸಂಬಂಧ ತಾಲೂಕು ಮಟ್ಟದಲ್ಲಿ ಕೋಳಿ ಫಾರಂಗಳ ಮಾಲೀಕರ ಸಭೆ ನಡೆಸಿ ಅವರಿಗೆ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಲು ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಾಣ ಎಂಬುದು ಅತ್ಯಂತ ಪ್ರಮುಖವಾದುದು, ಆದ್ದರಿಂದ ಕೋಳಿ ಫಾರಂಗಳ ಮಾಲೀಕರು ಸರ್ಕಾರ ಬಿಡುಗಡೆಗೊಳಿಸಿದ ಎಲ್ಲಾ ಮಾರ್ಗಸೂಚಿಗಳನ್ನು ತಪ್ಪದೇ ಅನುಸರಿಸಬೇಕು ಎಂದರು.
ಬಳಿಕ ಸಂಪನ್ಮೂಲ ವ್ಯಕ್ತಿ ಹಾಗೂ ಪಶು ವೈದ್ಯ ನಟರಾಜ್ ಮಾತನಾಡಿ, ಹಕ್ಕಿ ಜ್ವರ ಹರಡುವ ವಿಧಾನ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಹಕ್ಕಿಜ್ವರ ಸಾಂಕ್ರಾಮಿಕ ರೋಗವಾಗಿದ್ದು, ಮುನ್ನೆಚ್ಚರಿಕೆ ವಹಿಸಿದರೆ ಸೋಂಕನ್ನು ತಡೆಯಬಹುದಾಗಿದೆ. ಹೀಗಾಗಿ ಕಾಯಿಲೆಯ ಲಕ್ಷಣಗಳು ಕೋಳಿಗಳಲ್ಲಿ ಕಾಣಿಸಿಕೊಂಡ ಕೂಡಲೇ ಹತ್ತಿರದ ಮಾಹಿತಿ ಕೇಂದ್ರ ಅಥವಾ ಪಶು ವೈದ್ಯಕೀಯ ಸಂಸ್ಥೆಗೆ ಮಾಹಿತಿ ನೀಡಬೇಕು. ಒಂದು ವೇಳೆ ತಮ್ಮ ಫಾರಂಗಳಲ್ಲಿ ಕೋಳಿಗಳು ಆಕಸ್ಮಿಕವಾಗಿ ಮೃತಪಟ್ಟರೇ ಕೂಡಲೇ ನಮಗೆ ಮಾಹಿತಿ ನೀಡಬೇಕು. ಆಗ ರೋಗ ಹರಡದಂತೆ ತಡೆಗಟ್ಟಬಹುದು. ಹಕ್ಕಿ ಜ್ವರ ಗಾಳಿಯಲ್ಲೂ ಸಹ ಹರಡುತ್ತದೆ. ಆದ್ದರಿಂದ ಈ ವೈರಸ್ ಅತ್ಯಂತ ವೇಗವಾಗಿ ಹರಡಬಹುದಾಗಿದೆ. ಆದ್ದರಿಂದ ಸರ್ಕಾರದ ಮಾರ್ಗಸೂಚಿಗಳನ್ನು ತಾವು ತಪ್ಪದೇ ಅನುಸರಿಸಬೇಕು. ನಿಮಗೆ ಏನಾದರೂ ಸಂದೇಹಗಳಿದ್ದರೇ ಪಶು ಇಲಾಖೆಯ ವೈದ್ಯರನ್ನು ಸಂಪರ್ಕ ಮಾಡಬಹುದು ಎಂದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಆರೋಗ್ಯಾಧಿಕಾರಿ ನರಸಿಂಹಯ್ಯ ಮಾತನಾಡಿ, ಹಕ್ಕಿಜ್ವರ ಪೀಡಿತ ಪ್ರದೇಶಗಳಿಂದ ಕೋಳಿ ಮರಿಗಳನ್ನು ಕರೆತರಬಾರದು. ಕೋಳಿ ಫಾರಂ ಸುತ್ತ ಸ್ವಚ್ಛತೆಗೆ ಒತ್ತು ನೀಡುವಂತೆ ಸೂಚಿಸಲಾಗಿದೆ. ಕೋಳಿ ಮಾಂಸದ ಮಾರಾಟದ ಅಂಗಡಿಗಳ ಮಾಲೀಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಸುತ್ತಮುತ್ತ ಕ್ರಿಮಿನಾಶಕಗಳನ್ನು ಸಿಂಪಡಿಸಬೇಕು. ಈ ಸಂಬಂಧ ತಾಲೂಕು ಆಡಳಿತ ಸಹ ಅರಿವು ಮೂಡಿಸುವ ಕೆಲಸಕ್ಕೆ ಕೈಜೋಡಿಸಬೇಕು ಎಂದರು.
ಈ ವೇಳೆ ಕೋಳಿ ಫಾರಂ ಮಾಲೀಕರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ಹೇಳಿಕೊಂಡು. ಕೋಳಿ ಉದ್ಯಮವನ್ನು ಕೃಷಿ ಉಪಕಸಬು ಎಂದು ಘೋಷಣೆ ಮಾಡಲು ಸರ್ಕಾರಕ್ಕೆ ಪತ್ರ ಕಳಿಸಬೇಕು ಎಂದು ಮನವಿ ಮಾಡಿಕೊಂಡರು. ಈ ಸಮಯದಲ್ಲಿ ಪಶು ಆಸ್ಪತ್ರೆಯ ಡಾ.ಸುಬ್ರಮಣಿ ಸೇರಿದಂತೆ ತಾಲೂಕಿನ ಕೋಳಿ ಫಾರಂ ಮಾಲೀಕರು ಹಾಜರಿದ್ದರು.