Bangladesh – ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ಹಿಂದೂ ದೇವಾಲಯಗಳ ಮೇಲಿನ ಹಲ್ಲೆಗಳು ಸದ್ಯ ನಿಲ್ಲುವಂತಿಲ್ಲ. ಬಾಂಗ್ಲಾದ (Bangladesh) ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ಹೆಚ್ಚುತ್ತಿದ್ದು, ಇದೀಗ ಮತ್ತೊಂದು ಇಸ್ಕಾನ್ ದೇವಸ್ಥಾನದ (ISKCON) ಮೇಲೆ ದುರುಳರು ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಢಾಕಾದ ಧೋರ್ ಗ್ರಾಮದಲ್ಲಿರುವ ಮಹಾಭಾಗ್ಯ ಲಕ್ಷ್ಮೀನಾರಾಯಣ ಮಂದಿರದ ಮೇಲೆ ಶುಕ್ರವಾರ ತಡರಾತ್ರಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಡಿಸೆಂಬರ್ 6ರ ಶುಕ್ರವಾರದಂದು ಇಸ್ಕಾನ್ ದೇಗುಲದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು, ಭಗವಾನ್ ರಾಧಾಕೃಷ್ಣನ ವಿಗ್ರಹವನ್ನು ವಿರೂಪಗೊಳಿಸಿ ಬೆಂಕಿ ಹಚ್ಚಿದ್ದಾರೆ. ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಅವರ ಪೂರ್ವಜರ ದೇವಸ್ಥಾನವನ್ನು ಸುಟ್ಟು ಹಾಕಿರುವ ಬಗ್ಗೆ ದೂರು ದಾಖಲಿಸಲಾಗಿದೆ ಎಂದು ದೇವಸ್ಥಾನದ ಮೇಲ್ವಿಚಾರಕ ಬಾಬುಲ್ ಘೋಷ್ ತಿಳಿಸಿದ್ದಾರೆ. ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ನಿನ್ನೆ ರಾತ್ರಿ ಕೆಲ ದಾಳಿಕೋರರು ಹಿಂಬದಿಯಿಂದ ಮನೆಯೊಳಗೆ ನುಗ್ಗಿ ವಿಗ್ರಹಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸೀರೆ ಹಾಗೂ ಧೋತಿಯನ್ನು ಧರಿಸಿದ ಲಕ್ಷ್ಮೀ ಹಾಗೂ ನಾರಾಯಣನ ವಿಗ್ರಹಗಳು ಸೇರಿದಂತೆ ವಿಗ್ರಹಗಳ ಹಿಂದೆಯಿದ್ದ ಪರದೆ ಎಲ್ಲಾ ಸುಟ್ಟುಹೋಗಿದೆ. ಬೆಂಕಿಯನ್ನು ನೋಡಿದ ನೆರೆಹೊರೆಯವರು ನೀರಿನಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರು. ಈ ವೇಳೆ ಅಲ್ಲಿದ್ದ ದಾಳಿಕೋರರು ನಮ್ಮ ಕಾಲಿನ ಸದ್ದು ಕೇಳಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕೋಲ್ಕತ್ತಾ ಇಸ್ಕಾನ್ ಸಂಸ್ಥೆಯ ರಾಧಾರಾಮ್ ದಾಸ್ ರವರ ಪೋಸ್ಟ್ ಇಲ್ಲಿದೆ ನೋಡಿ: Click Here
ಇನ್ನೂ ಈ ಕುರಿತು ಕೋಲ್ಕತ್ತಾ ಇಸ್ಕಾನ್ ಸಂಸ್ಥೆಯ ರಾಧಾರಾಮ್ ದಾಸ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಖಚಿತಪಡಿಸಿದ್ದು, ದೇವಾಲಯದ ಒಳಗಿದ್ದ ದೇವತೆಗಳ ವಿಗ್ರಹಗಳು ಮತ್ತು ಇತರ ವಸ್ತುಗಳನ್ನು ಸಂಪೂರ್ಣವಾಗಿ ಸುಟ್ಟುಹಾಕಲಾಗಿದೆ. ಧ್ವಂಸಗೊಂಡ ಧಾರ್ಮಿಕ ಕೇಂದ್ರವು ತುರಾಗ್ ಪೊಲೀಸ್ ಠಾಣೆಯ ವ್ಯಾಪ್ತಿಯ ಢಾಕಾದಲ್ಲಿದೆ. ದೇವಸ್ಥಾನದ ಹಿಂಭಾಗದಲ್ಲಿರುವ ತಗಡಿನ ಮೇಲ್ಛಾವಣಿಯನ್ನು ಎತ್ತಿ ಪೆಟ್ರೋಲ್ ಅಥವಾ ಆಕ್ಟೇನ್ ಬಳಸಿ ಧಾರ್ಮಿಕ ಕೇಂದ್ರಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.