Crime News – ಅಕ್ರಮ ಸಂಬಂಧಗಳ ಕಾರಣದಿಂದ ಅನೇಕ ಪ್ರಾಣಗಳು, ಕುಟುಂಬಗಳು ನಾಶವಾಗುತ್ತಿರುತ್ತವೆ. ಅಕ್ರಮ ಸಂಬಂಧ ತಪ್ಪಾಗಿದ್ದರೂ ಸಹ ಅದನ್ನು ತಿಳಿದೂ ಕೆಲವರು ಅದೇ ತಪ್ಪು ಮಾಡುತ್ತಿರುತ್ತಾರೆ. ಅದೇ ರೀತಿಯ ಘಟನೆಯೊಂದು ಇಲ್ಲಿ ನಡೆದಿದೆ. ಮುದ್ದಾದ ಗಂಡನಿದ್ದರೂ ಸಹ ಗೃಹಿಣಿಯೊಬ್ಬರು ವಾಟ್ಸಾಪ್ ಪ್ರೇಮಿಯ (Crime News) ಹಿಂದೆ ಬಿದ್ದು, ಇದೀಗ ತನ್ನ ಪ್ರಾಣವನ್ನೆ ಕಳೆದುಕೊಂಡಿದ್ದಾಳೆ. ಚಾಕುವಿನಿಂದ ಚುಚ್ಚಿದರೂ ಆಕೆ ಸಾಯದೇ ಇರುವುದರಿಂದ ಮನೆಯ ಹಿಂದಿನ ಕೆರೆಗೆ ಆಕೆಯನ್ನು ದೂಡಿ ಕೊಲೆ ಮಾಡಿದ್ದಾನೆ ವಾಟ್ಸಪ್ ಪ್ರೇಮಿ.

ಈ ಘಟನೆ ಚಿಕ್ಕಮಗಳೂರಿನ ಬಾಳೆಹೊನ್ನೂರು ಸಮೀಪದ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದಿದೆ. ಕಿಚ್ಚಬ್ಬಿ ಗ್ರಾಮದ ತೃಪ್ತಿ (25) ಎಂಬ ಗೃಹಿಣಿಯೇ ಮೃತ ದುರ್ದೈವಿ. ಆಕೆಯ ಕೊಲೆ ಮಾಡಿದ ಆರೋಪಿಯನ್ನು ಚಿರಂಜೀವಿ ಎಂದು ಗುರ್ತಿಸಲಾಗಿದೆ. ಮೃತ ತೃಪ್ತಿ ಮತ್ತು ಚಿರಂಜೀವಿ ಫೇಸ್ಬುಕ್ ಮೂಲಕ ಪರಿಚಯವಾಗಿ ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ತೃತ್ತಿ ತನ್ನ ಪತಿ ರಾಜು ನನ್ನು ಬಿಟ್ಟು ಪ್ರಿಯಕರನ ಜೊತೆ ನಾಪತ್ತೆಯಾಗಿದ್ದರು. ಈ ಬಗ್ಗೆ ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ಕೇಸ್ ಕೂಡ ದಾಖಲಾಗಿತ್ತು. ತೃಪ್ತಿ ಮತ್ತು ಪ್ರಿಯಕರ ಚಿರಂಜೀವಿ ಬಿಜಾಪುರದಲ್ಲಿ ತಲೆಮರೆಸಿಕೊಂಡಿದ್ದ ಸುದ್ದಿ ತಿಳಿದ ಪೊಲೀಸರು ಅವರನ್ನು ಹುಡುಕಿ ಕರೆತಂದಿದ್ದರು. ಬಳಿಕ ಪೋಷಕರು ಸಂಧಾನ ನಡೆಸಿ ರಾಜುವಿನೊಂದಿಗೆ ತೃಪ್ತಿಯನ್ನು ಕಳುಹಿಸಿದ್ದರು.
ಮನೆಗೆ ವಾಪಸ್ಸಾದ ಬಳಿಕ ತೃಪ್ತಿ ತನ್ನ ಪ್ರಿಯಕರ ಚಿರಂಜೀವಿ ಜೊತೆಗೆ ಮಾತು ಹಾಗೂ ಸ್ನೇಹವನ್ನು ಸಹ ಬಿಟ್ಟಿದ್ದಳು. ಇದರಿಂದ ಕೋಪಗೊಂಡ ಚಿರಂಜೀವಿ ಶನಿವಾರ ಏಕಾಏಕಿ ಮನೆಗೆ ನುಗ್ಗಿ ಮಕ್ಕಳ ಎದುರಲ್ಲಿಯೇ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಚಾಕುವಿನಿಂದ ಚುಚ್ಚಿದರೂ ತೃಪ್ತಿ ಸಾಯದೇ ಇದ್ದಾಗ ಮನೆಯ ಹಿಂಬಂದಿಯಲ್ಲಿದ್ದ ಕೆರೆಗೆ ಆಕೆಯನ್ನು ಎಸೆದು ಕೊಲೆ ಮಾಡಿದ್ದಾನೆ. ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿದ್ದ ಆರೋಪಿ ಚಿರಂಜೀವಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ.