Love Failure – ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಮೂಲದ ಏರೋನಾಟಿಕ್ಸ್ ಇಂಜಿನಿಯರ್ ಆಕಾಂಕ್ಷಾ ಎಸ್. ನಾಯರ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಯುವತಿ ಪ್ರೇಮ ವೈಫಲ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಇಡೀ ಧರ್ಮಸ್ಥಳದಲ್ಲಿ ದುಃಖದ ಛಾಯೆ ಮೂಡಿಸಿದೆ.
Love Failure – ಯಾರು ಈ ದುರ್ದೈವಿ ಆಕಾಂಕ್ಷಾ?
ಧರ್ಮಸ್ಥಳದ ಬೊಳಿಯೂರು ನಿವಾಸಿಗಳಾದ ಸುರೇಂದ್ರ ನಾಯರ್ ಮತ್ತು ಸಿಂಧೂ ದೇವಿ ಅವರ ಪುತ್ರಿ ಆಕಾಂಕ್ಷಾ ಎಸ್. ನಾಯರ್ (22). ಪ್ರತಿಭಾವಂತೆಯಾಗಿದ್ದ ಆಕಾಂಕ್ಷಾ ಅವರು ಏರೋನಾಟಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಶನಿವಾರ (ಮೇ 17) ರಂದು ಪಂಜಾಬ್‌ನ ಪಗ್ವಾರದಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ಕಟ್ಟಡದ ನಾಲ್ಕನೇ ಮಹಡಿಯಿಂದ ಆಕಾಂಕ್ಷಾ ಅವರು ಹಠಾತ್ತನೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
Love Failure – ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣ?
ಪೊಲೀಸ್ ತನಿಖೆಯ ಪ್ರಕಾರ, ಮೃತ ಆಕಾಂಕ್ಷಾ ಅವರು ಅದೇ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಬಿಜಿಲ್ ಮ್ಯಾಥ್ಯೂ ಎಂಬುವರನ್ನು ಪ್ರೀತಿಸುತ್ತಿದ್ದರು. ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ಕೇರಳದ ಕೊಟ್ಟಾಯಂನವರಾಗಿದ್ದು, ವಿವಾಹಿತರಾಗಿದ್ದು ಇಬ್ಬರು ಮಕ್ಕಳ ತಂದೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಆಕಾಂಕ್ಷಾ ಅವರು ಪ್ರಾಧ್ಯಾಪಕ ಮ್ಯಾಥ್ಯೂ ಅವರ ಮನೆಗೆ ಹೋಗಿ ಮದುವೆಯಾಗುವಂತೆ ಒತ್ತಾಯಿಸಿ ಜಗಳವಾಡಿದ್ದಾರೆ ಎನ್ನಲಾಗಿದೆ. ನಂತರ ಕಾಲೇಜಿನಲ್ಲೂ ಸಹ ಬಿಜಿಲ್ ಮ್ಯಾಥ್ಯೂ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಘಟನೆಯ ನಂತರ ಮನನೊಂದ ಆಕಾಂಕ್ಷಾ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ತಮ್ಮ ಜೀವವನ್ನು ಕೊನೆಗೊಳಿಸಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣದ ತನಿಖೆ ಚುರುಕು
ಆತ್ಮಹತ್ಯೆಗೆ ಪ್ರೇರಣೆ ನೀಡಿದ ಹಿನ್ನೆಲೆಯಲ್ಲಿ ಪ್ರಾಧ್ಯಾಪಕ ಮ್ಯಾಥ್ಯೂ ವಿರುದ್ಧ ಪಂಜಾಬ್‌ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇನ್ನೂ ಮೃತದೇಹವನ್ನು ಧರ್ಮಸ್ಥಳಕ್ಕೆ ತರಲಾಗಿದ್ದು, ಸೋಮವಾರ (ಮೇ 19) ಸಂಜೆ ವೇಳೆಗೆ ಬೊಳಿಯೂರಿನ ಅವರ ಸ್ವಗೃಹದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Read this also : ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಏರೋಸ್ಪೇಸ್ ಎಂಜಿನಿಯರ್ ದುರಂತ ಸಾವು: ಪೋಷಕರ ಅನುಮಾನ!
ಜಪಾನ್ ಕನಸು ಕಂಡಿದ್ದ ಆಕಾಂಕ್ಷಾ
ಆಕಾಂಕ್ಷಾ ಅವರು ಕಳೆದ 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಉನ್ನತ ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ಜಪಾನ್‌ಗೆ ಹೋಗುವ ಮಹದಾಸೆಯನ್ನು ಹೊಂದಿದ್ದರು. ಇದೇ ಕಾರಣಕ್ಕಾಗಿ ಶನಿವಾರ ಕಾಲೇಜಿಗೆ ತೆರಳಿ ತಮ್ಮ ಅಂಕಪಟ್ಟಿ ಮತ್ತು ಇತರ ದಾಖಲೆಗಳನ್ನು ಪಡೆಯಲು ಹೋಗಿದ್ದರು. ಪೋಷಕರೊಂದಿಗೆ ಮಾತನಾಡಿದ ಆಕಾಂಕ್ಷಾ, ದಾಖಲೆಗಳನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ಆಕೆಯ ಸಾವಿನ ಸುದ್ದಿ ಆಘಾತವನ್ನುಂಟು ಮಾಡಿದೆ.