ಸದ್ಯ ಕರ್ನಾಟಕದಲ್ಲಿ BPL-APL ರೇಷನ್ ಕಾರ್ಡ್‌ಗಳ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿಬರುತ್ತಿದ್ದು, ಈ ಸುದ್ದಿ ಇದೀಗ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ರಾಜ್ಯ ಕಾಂಗ್ರೇಸ್ ಸರ್ಕಾರ ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಗಲಿ ಎಂದು ಹೇಳುತ್ತಿದ್ದರೇ, ಅತ್ತ ವಿರೋಧ ಪಕ್ಷ ಗ್ಯಾರಂಟಿಗಳನ್ನು ಕೊಡಲು ಆಗದೇ ಇರುವುದರಿಂದ ರೇಷನ್ ಕಾರ್ಡ್ ರದ್ದು ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡುತ್ತಿದ್ದಾರೆ. ಇದೀಗ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ (K.H Muniyappa) ಬಿಪಿಎಲ್ ಆಗಲಿ, ಎಪಿಎಲ್ ಆಗಲಿ ಯಾವ ಕಾರ್ಡ್ ರದ್ದಾಗಲ್ಲ. ಯಾರು ಭಯಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದಾಗಲ್ಲ, ಎಪಿಎಲ್ ಕಾರ್ಡ್ ರದ್ದಾಗಲ್ಲ. ಶೇಕಡಾ 20-25ರಷ್ಟು BPLಗೆ ಅರ್ಹರಲ್ಲದವರು ಸೇರಿಕೊಂಡಿದ್ದಾರೆ. ಬಡವರಲ್ಲದವರು, ಅರ್ಹರಲ್ಲದವರೂ ಕೂಡ ಸೇರಿಕೊಂಡಿದ್ದಾರೆ. ಜನರು ಭಯಪಡಬೇಕಿಲ್ಲ, ಯಾವ ಕಾರ್ಡ್ ಕೂಡ ರದ್ದಾಗಲ್ಲ. ಬಡವರಲ್ಲದವರು ಹಾಗೂ ಅರ್ಹರಲ್ಲದವರೂ ಕೂಡ ಇದರಲ್ಲಿ ಸೇರಿಕೊಂಡಿದ್ದಾರೆ. 80% ರಾಜ್ಯದಲ್ಲಿ ಬಡವರ ಪ್ರಮಾಣ ಇದೆ. ಇದು ಸಾಧ್ಯವೇ? ಕರ್ನಾಟಕ ರಾಜ್ಯದಲ್ಲಿ 80% ಬಡವರಿದ್ದಾರಾ? ಯಾವುದೇ ಕಾರಣಕ್ಕೂ ಬಿಪಿಎಲ್ ರದ್ದು ಮಾಡುವುದಿಲ್ಲ. ಇದಕ್ಕೆ ರಾಜಕೀಯ ಬೆರೆಸಿ ದೊಡ್ಡ ಗದ್ದಲ ಮಾಡ್ತಿದ್ದಾರೆ. ಯಾರು ಬಡತನ ರೇಖೆಗಿಂತ ಕೆಳಗಿದ್ದಾರೆ, ಯಾರು ಮೇಲಿದ್ದಾರೆ ಸತ್ಯವಾದ ಮಾಹಿತಿ ಹೊರಗೆ ಬಿಡುತ್ತೇನೆ. ಬಿಜೆಪಿಯವರು (BJP) ಸುಮ್ಮನೆ ತರಲೆ ಮಾಡ್ತಿದ್ದಾರೆ. ಬಿಪಿಎಲ್ ಕಾರ್ಡ್ ದಾರರು ಭಯ ಪಡಬೇಕಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳು ಇವೆ ಎಂದು ಆಹಾರ ಇಲಾಖೆಗೆ ಇ ಗವರ್ನೆನ್ಸ್ ಇಲಾಖೆ ಮಾಹಿತಿ ನೀಡಿದೆ. ಇದರಿಂದ ಇಷ್ಟು ಭಾರೀ ಪ್ರಮಾಣದ ಬಿಪಿಎಲ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. ಆಗಸ್ಟ್ ತಿಂಗಳಿನಲ್ಲೇ ಶಾಕಿಂಗ್ ಅಂಕಿ ಅಂಶವನ್ನ ಇ ಗವರ್ನೆನ್ಸ್ ಇಲಾಖೆ ಬಿಚ್ಚಿಟ್ಟಿದೆ. ಇ ಗವರ್ನೆನ್ಸ್ ಇಲಾಖೆ ನೀಡಿದ ಮಾಹಿತಿ ಇಟ್ಟುಕೊಂಡೇ ಸರ್ಕಾರ ಬಿಪಿಎಲ್ ಕಾರ್ಡ್ ರದ್ದುಗೊಳಿಸುತ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಸಹ ಪ್ರತಿಕ್ರಿಯೆ ನೀಡಿದ್ದಾರೆ. BPL ಕಾರ್ಡ್ ಬಗ್ಗೆ ಬಡವರು ಆತಂಕ ಪಡುವ ಅಗತ್ಯ ಇಲ್ಲ. ಅರ್ಹರ BPL ಕಾರ್ಡ್ ರದ್ದು ಮಾಡ್ಬೇಡಿ ಅಂತ ನಾನು ಮುನಿಯಪ್ಪಗೆ ಸೂಚನೆಯನ್ನ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಬಡವರಿಗೆ ಕಾರ್ಡ್ ರದ್ದಾಗಬಾರದು. ನಮ್ಮ ಸರ್ಕಾರ ಬಡವರಪರ ಕೆಲಸ ಮಾಡುವ ಸರ್ಕಾರ. ಬಡವರ ಅಭಿವೃದ್ದಿಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ. ಬಿಜೆಪಿ ಪಕ್ಷದವರಿಂದ ನಾವು ಕಲಿಯಬೇಕಿಲ್ಲ ಎಂದು ಹೇಳಿದ್ದರು.