ಕರ್ನಾಟಕ ರಾಜ್ಯ ಸರ್ಕಾರಿ ನೌಕರರು 7ನೇ ವೇತನ ಆಯೋಗ ಜಾರಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. 7 Pay Commission ಅನುಷ್ಟಾನಕ್ಕಾಗಿ ಕಾದುಕುಳಿತಿದ್ದಾರೆ. ಈ ನಡುವೆ ನೌಕರರ ಹೋರಾಟಕ್ಕೆ ಜಯ ಸಿಗುವ ಕಾಲ ಸನ್ನಿಹವಾಗುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ಭರವಸೆ ಸಹ ನೀಡಿದ್ದಾರೆ. ಶೀಘ್ರದಲ್ಲೇ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ರವರು ತಿಳಿಸಿದ್ದಾರೆ. ಈಗಾಗಲೇ ಸರ್ಕಾರಿ ನೌಕರರ ಬೇಡಿಕೆಗಳನ್ನು ಚರ್ಚೆ ಮಾಡಲಾಗಿದೆ. ಇನ್ನೊಮ್ಮೆ ಸರ್ಕಾರಿ ನೌಕರರ ಸಂಘದವರನ್ನು ಕರೆಸಿ ಸಿಎಂ ರವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು 7ನೇ ವೇತನ ಆಯೋಗ ಜಾರಿಗೆ ಬಗ್ಗೆ ಪಾಸಿಟೀವ್ ಹೇಳಿಕೆ ನೀಡಿದ್ದಾರೆ. ಇನ್ನೂ ಕಲ್ಯಾಣ ಕರ್ನಾಟಕದ ಖಾಲಿ ಹುದ್ದೆಗಳ ಭರ್ತಿಗೂ ನಮ್ಮ ಸರ್ಕಾರ ಬದ್ದವಾಗಿದೆ. ವರ್ಷಕ್ಕೆ 15 ಸಾವಿರ ಹುದ್ದೆಗಳಂತೆ 2 ವರ್ಷಗಳಲ್ಲಿ 30 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈಗಾಗಲೇ ಈ ಪ್ರಕ್ರಿಯೆ ಸಹ ಆರಂಭವಾಗಿದೆ, ನೌಕರರಿಗೆ ಬಡ್ತಿ ನೀಡುವ ಬೇಡಿಕೆಯನ್ನೂ ಸಹ ಈಡೇರಿಸಲಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಸರ್ಕಾರಿ ನೌಕರರ ಹಕ್ಕುಗಳನ್ನು ಈಡೇರಿಸಲು ಸರ್ಕಾರ ಬದ್ದವಾಗಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನಡೆಸಲು ಸರ್ಕಾರಿ ನೌಕರರ ಸಹಕಾರ ತುಂಬಾನೆ ಅಗತ್ಯವಾಗಿದ್ದು, ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಎಂದು ತಿಳಿಸಿದ್ದಾರೆ.
ಈ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ರವರು ಮಾತನಾಡಿ, ಸುಮಾರು ದಿನಗಳಿಂದ ಸರ್ಕಾರಿ ನೌಕರರು 7ನೇ ವೇತನ ಆಯೋಗ ಜಾರಿಗೆ ಹೋರಾಟ ನಡೆಸಿದೆ. ಏಳನೇ ವೇತನ ಆಯೋಗ ಶಿಫಾರಸ್ಸು ಮಾಡಿದಂತೆ ಯಥಾವತ್ ಜಾರಿ ಮಾಡಬೇಕು. ಶೀಘ್ರವಾಗಿ ರಾಜ್ಯದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ದೇಶದ GST ಸಂಘ್ರಹದಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ, ಅಭಿವೃದ್ದಿ 5ನೇ ಸ್ಥಾನದಲ್ಲಿದೆ. ಇದಕ್ಕೆ ರಾಜ್ಯ ಸರ್ಕಾರಿ ನೌಕರರೇ ಮುಖ್ಯ ಕಾರಣ. ಜು.4 ರಂದು ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ವೇತನ ಆಯೋಗ ಹಾಗೂ ಒಪಿಎಸ್ ಜಾರಿ ಮಾಡಬೇಕು. ಜು.7 ರಂದು ಸರ್ಕಾರಿ ನೌಕರರ ಸಭೆ ಕರೆದಿದ್ದು, ಅಲ್ಲಿ ಏನು ತೀರ್ಮಾನ ಮಾಡಬೇಕೆಂದು ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.