ನಗುನಗುವ ಮಗು ದೇಶದ ಸಂಪತ್ತು. ಅಂತಹ ಮಕ್ಕಳ ಭವಿಷ್ಯವನ್ನು ಪೋಲಿಯೋ ಎಂಬ ಮಹಾಮಾರಿಯಿಂದ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕಾಗಿ ಪೋಷಕರು ಸ್ವಯಂಪ್ರೇರಿತರಾಗಿ ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಬೇಕು,” ಎಂದು ಗುಡಿಬಂಡೆ ತಾಲೂಕು ಆರೋಗ್ಯಾಧಿಕಾರಿ ಡಾ. ಅಕ್ಷಯ್ ಕರೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಪಲ್ಸ್ ಪೋಲಿಯೋ (Pulse Polio) ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Pulse Polio – ಆರೋಗ್ಯವಂತ ಸಮಾಜಕ್ಕೆ ಇಂದಿನ ಮಕ್ಕಳೇ ಅಡಿಪಾಯ
ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಇಂದಿನ ಮಕ್ಕಳು ದೈಹಿಕವಾಗಿ ಸದೃಢವಾಗಿರಬೇಕು. ಬಾಲ್ಯದಲ್ಲಿಯೇ ಮಕ್ಕಳನ್ನು ಕಾಡುವ ಪೋಲಿಯೋ ರೋಗವನ್ನು ತಡೆಗಟ್ಟಲು ದೇಶಾದ್ಯಂತ ಈ ಅಭಿಯಾನ ನಡೆಯುತ್ತಿದೆ. ಇದು ಕೇವಲ ಲಸಿಕೆಯಲ್ಲ, ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ‘ಸಂಜೀವಿನಿ’ ಆಗಿದೆ. ಹೀಗಾಗಿ ಪೋಷಕರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ, ತಮ್ಮ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಶೇ.100 ರಷ್ಟು ಪ್ರಗತಿ ಸಾಧಿಸಲು ಸಹಕರಿಸಬೇಕು ಎಂದು ಡಾ. ಅಕ್ಷಯ್ ಸಾರ್ವಜನಿಕರಲ್ಲಿ ಮನವಿ ಮಾಡಿದರು. Read this also : ಬೆಳ್ಳುಳ್ಳಿ ಕೇವಲ ಅಡುಗೆಗಷ್ಟೇ ಅಲ್ಲ, ಸೌಂದರ್ಯಕ್ಕೂ ಸಂಜೀವಿನಿ! ಕೂದಲು ಉದುರುವಿಕೆ, ಮುಖದ ಕಲೆಗೆ ಇಲ್ಲಿದೆ ರಾಮಬಾಣ
Pulse Polio – ಡಿ.24 ರವರೆಗೆ ಅಭಿಯಾನ
ಮರೆಯದೇ ಲಸಿಕೆ ಹಾಕಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿಕಾಸ್, “ಸದೃಢ ಸಮಾಜಕ್ಕಾಗಿ ಪೋಲಿಯೋ ಲಸಿಕೆ ಅತ್ಯಗತ್ಯ. ಡಿಸೆಂಬರ್ 21 ರಿಂದ ಡಿಸೆಂಬರ್ 24 ರವರೆಗೆ ಈ ಅಭಿಯಾನ ನಡೆಯಲಿದ್ದು, ಪೋಷಕರು ಈ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು,” ಎಂದರು. “ಇಂದು ನೀವು ಹಾಕಿಸುವ ಎರಡು ಹನಿ ಲಸಿಕೆ, ನಿಮ್ಮ ಮಗುವನ್ನು ಶಾಶ್ವತ ಅಂಗವೈಕಲ್ಯದಿಂದ ರಕ್ಷಿಸುವ ಭದ್ರತಾ ಕವಚವಾಗಿದೆ. ಆದ್ದರಿಂದ ಮನೆಯಲ್ಲಿ 5 ವರ್ಷದೊಳಗಿನ ಮಕ್ಕಳಿದ್ದರೆ ಕೂಡಲೇ ಹತ್ತಿರದ ಲಸಿಕಾ (Pulse Polio) ಕೇಂದ್ರಕ್ಕೆ ಕರೆದೊಯ್ದು ಲಸಿಕೆ ಹಾಕಿಸಿ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ (Pulse Polio) ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಪ್ರದೀಪ್, ಆರೋಗ್ಯ ರಕ್ಷಾ ಸಮಿತಿಯ ಕೆ.ಟಿ. ನಂಜುಂಡಪ್ಪ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

