Love – ಕಳೆದ ಹತ್ತು ವರ್ಷದಿಂದ ಪ್ರೀತಿಸುತಿದ್ದ ಹುಡುಗಿ ಬೇರೆಯವನನ್ನು ಮದುವೆಯಾದಳು ಎಂಬ ಕೋಪದೊಂದ ಯುವಕನೊಬ್ಬ ಆಕೆಯ ಗಂಡನನ್ನು ಬಸ್ನಲ್ಲಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ನಡೆದಿದೆ. ಶಿರಸಿ ನಗರದ KSRTC ಬಸ್ ನಿಲ್ದಾಣದ ಸಮೀಪ ಶನಿವಾರ ಈ ಘಟನೆ ನಡೆದಿದ್ದು, ಪ್ರೀತಮ್ ಎಂಬಾತನೇ ಕೊಲೆ ಮಾಡಿ ಪರಾರಿಯಾಗಿದ್ದ, ಬಳಿಕ ಪೊಲೀಸರಿಗೆ ಸಿಕ್ಕಿಬಿದಿದ್ದು, ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸುಮಾರು 10 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಕೈ ಕೊಟ್ಟಳು ಎಂಬ ಕಾರಣದಿಂದ ಕೋಪಗೊಂಡ ಭಗ್ನ ಪ್ರೇಮಿಯೋರ್ವ ಪ್ರೇಯಸಿಯ ಗಂಡನನ್ನು ಬಸ್ ನಲ್ಲಿಯೇ ಕೊಲೆ ಮಾಡಿದ್ದಾನೆ. ಮೃತ ದುರ್ದೈವಿಯನ್ನು ಸಾಗರ ತಾಲೂಕಿನ ನೀಚಡಿಯ ಗಂಗಾಧರ್ ಎಂದು ಗುರ್ತಿಸಲಾಗಿದೆ. ಆರೋಪಿ ಪ್ರೀತಮ್ ಶಿರಸಿ ಮೂಲದ ಪೂಜಾ ಎಂಬಾಕೆಯನ್ನು ಹತ್ತು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ. ಆಕೆ ಸಹ ಪ್ರೀತಮ್ ನನ್ನು ಪ್ರೀತಿಸುತ್ತಿದ್ದಳಂತೆ. ಆದರೆ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋದಾಗ ಪೂಜಾಳಿಗೆ ಸಾಗರ ತಾಲೂಕಿನ ನೀಚಡಿಯ ಗಂಗಾಧರ್ ಎಂಬಾತನನ್ನು ಮದುವೆಯಾಗಲು ತೀರ್ಮಾನಿಸಿದ್ದಳು. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೆ ಪೂಜಾ ಹಾಗೂ ಗಂಗಾಧರ್ ಗೆ ಮದುವೆಯಾಗಿತ್ತು. ಮದುವೆಯಾಗಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು.

ಆದರೆ ಶನಿವಾರ (ಫೆ.22)ರ ಸಂಜೆ ಗಂಗಾಧರ್ ಪತ್ನಿಯ ಸಂಬಂಧಿಕರ ಕಾರ್ಯಕ್ರಮಕ್ಕೆ ಪತ್ನಿಯೊಂದಿಗೆ ಬಂದು ಶನಿವಾರ ರಾತ್ರಿ ಬೆಂಗಳೂರಿಗೆ KSRTC ಬಸ್ನಲ್ಲಿ ನಿಲ್ದಾಣದಿಂದ ತೆರಳುತ್ತಿದ್ದರು. ಈ ವೇಳೆ ಪ್ರೀತಮ್ ಕೂಡ ಬಸ್ಗೆ ಹತ್ತಿದ್ದು, ಏಕಾಏಕಿ ಗಂಗಾಧರ್ನೊಂದಿಗೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ಹೋಗಿದೆ. ಪ್ರೀತಮ್ ಚೂರಿ ತೆಗೆದು, ಗಂಗಾಧರ್‌ನ ಹೃದಯ ಭಾಗಕ್ಕೆ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ಗಂಗಾಧರ್ ಸಾವನ್ನಪ್ಪಿದ್ದಾರೆ. ಬಳಿಕ ಪ್ರೀತಮ್ ಬಸ್ ನಿಂದ ಇಳಿದು ಪರಾರಿಯಾಗಿದ್ದಾನೆ. ನಂತರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇದೇ ಸಮಯದಲ್ಲಿ ಗಂಗಾಧರ್ ಪತ್ನಿ ಪೂಜಾಳನ್ನು ವಿಚಾರಣೆ ಮಾಡಿದಾಗ ಕೊಲೆ ಮಾಡಿದವನ ಸಂಪೂರ್ಣ ವಿವರಗಳನ್ನು ತಿಳಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.