Dr B R Ambedkar ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ನಂಬಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರು ಓದುವ ಸಮಯದಲ್ಲಿ ಶಿಕ್ಷಣ ಪಡೆಯುವುದು ತುಂಬಾನೆ ಕಷ್ಟವಾಗಿತ್ತು.ಆದರೂ ಸಹ ಕಷ್ಟಪಟ್ಟು ಶಿಕ್ಷಣ ಪಡೆದು ಎಲ್ಲಾ ಸಮುದಾಯಗಳ ಜನತೆಗೆ ಶಿಕ್ಷಣ ದೊರೆಯುವಂತೆ ಮಾಡಿದ್ದಾರೆ ಎಂದು ಬಿ.ಇ.ಒ ಕೃಷ್ಣಪ್ಪ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ 68ನೇ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ರವರು ಹುಟ್ಟಿದ್ದು ದಲಿತ ಸಮುದಾಯದಲ್ಲಿ ಆದರೇ ಅವರು ಆ ಜಾತಿಗೆ ಸೀಮಿತವಲ್ಲದೆ ಎಲ್ಲಾ ಜಾತಿಗಳ ಜನರ ಸಂಕಷ್ಟಗಳ ಪರಿಹಾರಕ್ಕೆ ನಿರಂತರವಾಗಿ ಆಲೋಚಿಸಿ ಶ್ರಮವಹಿಸಿ ಕೆಲಸ ಮಾಡಿ ಸಮಸ್ಯೆಗಳಿಗೆ ಪರಿಹಾರವನ್ನು ಕೊಟ್ಟಿದ್ದಾರೆ. ಅಂದು ಅಂಬೇಡ್ಕರ್ ರವರು ಶಿಕ್ಷಣವನ್ನು ಪಡೆಯುವ ವೇಳೆ ವಿದ್ಯಾರ್ಥಿ ವೇತನಗಳನ್ನು ಪಡೆದುಕೊಂಡು ಪುಸ್ತಕಗಳನ್ನು ಖರೀದಿ ಮಾಡಿಕೊಂಡು ಬರುತ್ತಿದ್ದರು. ಅವರಂತೆ ಬಡವರಿಗೆ ಶಿಕ್ಷಣ ದೂರದ ವಸ್ತುವಾಗಬಾರದೆಂದು ಸಂವಿಧಾನದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ತುಂಬಾನೆ ಪ್ರಾಶಸ್ತ್ಯ ನೀಡಿದ್ದಾರೆ. ಆದರೆ ಇಂದಿನ ಅನೇಕ ವಿದ್ಯಾರ್ಥಿಗಳು ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದರು.

ಬಳಿಕ ತಾ.ಪಂ, ಕಾರ್ಯನಿರ್ವಹಣಾಧಿಕಾರಿ ನಾಗಮಣಿ ಮಾತನಾಡಿ, ಅಂಬೇಡ್ಕರ್ ರವರನ್ನು ಓದಿಕೊಂಡು ಅವರ ಸಿದ್ದಾಂತ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಆ ಮಾರ್ಗದಲ್ಲಿ ನಡೆದರೇ ನಾವು ನಿಜವಾಗಿ ಅಂಬೇಡ್ಕರ್ ರವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಅಂಬೇಡ್ಕರ್ ರವರು ನಡೆದು ಬಂದ ಹಾದಿಯನ್ನು ಪ್ರತಿಯೊಬ್ಬರು ತಿಳಿಯಬೇಕು. ಅವರು ಸಮಾಜಕ್ಕೆ ಕೊಟ್ಟ ಕೊಡುಗೆ ಸದಾಕಾಲ ನೆನಪಿನಲ್ಲಿಟ್ಟುಕೊಳ್ಳಬೇಕೆಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಹೂವಿನ ಹಾರ ಹಾಕುವ ಮೂಲಕ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಸಹ ಬೋಧಿಸಲಾಯಿತು. ಈ ವೇಳೆ ತಹಶೀಲ್ದಾರ್ ಸಿಗ್ಬತ್ ವುಲ್ಲಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ್ಮೀಪತಿ ರೆಡ್ಡಿ, ಶಿಕ್ಷಕರ ಸಂಘದ ಬಾಲಾಜಿ, ಶ್ರೀರಾಮಪ್ಪ, ನೌಕರರ ಸಂಘದ ಮುನಿಕೃಷ್ಣಪ್ಪ, ಕೃಷಿ ಇಲಾಖೆಯ ಕೇಶವರೆಡ್ಡಿ, ದಲಿತ ಮುಖಂಡರಾದ ರಮಣ, ಸುಬ್ಬರಾಯಪ್ಪ, ಈಶ್ವರಪ್ಪ, ನರಸಿಂಹಪ್ಪ , ಗಂಗಾಧರಪ್ಪ, ರಾಜು, ನಾರಾಯಣಪ್ಪ, ಎಂ ಸಿ ನರಸಿಂಹಪ್ಪ, ನರಸಿಂಹಮೂರ್ತಿ, ಗಣೇಶ್ ಸೇರಿದಂತೆ ಹಲವರು ಇದ್ದರು.