ಲೋಕಸಭಾ ಚುನಾವಣೆ 2024ರ ಚುನಾವಣೆಯಲ್ಲಿ ಮೈಸೂರು ಕ್ಷೇತ್ರ ತುಂಬಾ ಕುತೂಹಲ ಮೂಡಿಸಿತ್ತು. ಕಳೆದ ಚುನಾವನೆಯಲ್ಲಿ ಗೆದ್ದು ಸಂಸದರಾಗಿದ್ದ ಪ್ರತಾಪ್ ಸಿಂಹ ರವರ ಬದಲು ಮೈಸೂರ್ ಸಂಸ್ಥಾನದ ಯಧುವೀರ್ ಶ್ರೀಕಂಟದತ್ತ ನರಸಿಂಹರಾಜ ಒಡೆಯರ್ (Yaduveer Krishnadatta Chamaraja Wadiyar) ಸ್ಪರ್ಧೆ ಮಾಡಿದ್ದರು. ಈ ಕಣ ಸಿಎಂ ಸಿದ್ದರಾಮಯ್ಯನವರ ತವರು ಕ್ಷೇತ್ರವಾಗಿದ್ದು, ಸಿಎಂ ತವರಿನಲ್ಲೆ ಬಿಜೆಪಿ ಗೆಲುವು ಸಾಧಿಸಿದ್ದು, ಈ ಹಿನ್ನೆಲೆಯಲ್ಲಿ ತವರು ಕ್ಷೇತ್ರದಲ್ಲೇ ಸಿಎಂ ಸಿದ್ದರಾಮಯ್ಯ ಮುಖಭಂಗ ಅನುಭವಿಸುವಂತಾಗಿದೆ.
ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಯಧುವೀರ್ ಶ್ರೀಕಂಟದತ್ತ ನರಸಿಂಹರಾಜು ಒಡೆಯರ್ ಮೈತ್ರಿ ಅಭ್ಯರ್ಥಿಯಾಗಿದ್ದರು. ಈ ಕ್ಷೇತ್ರ ತುಂಬಾನೆ ಪ್ರಮುಖ ಎಂದೇ ಹೇಳಲಾಗುತ್ತಿತ್ತು. ಕಾರಣ ಇದು ಕರ್ನಾಟಕ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರವಾಗಿರುವ ಕಾರಣ ತುಂಬಾ ಪ್ರತಿಷ್ಟೆಯಾಗಿ ತೆಗೆದುಕೊಳ್ಳಲಾಗಿತ್ತು. ಕಾಂಗ್ರೇಸ್ ಪಕ್ಷದಿಂದ ಎಂ.ಲಕ್ಷ್ಮಣ್ ಸ್ಪರ್ಧೆ ಮಾಡಿದ್ದರು. ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಯದುವೀರ್ 1.30 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಮೈಸೂರು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಂತರ ಯದುವೀರ ಪಾರ್ಲಿಮೆಂಟ್ ಪ್ರವೇಶಿಸಿದ್ದಾರೆ.
ಇನ್ನೂ ಸಿಎಂ ಸಿದ್ದರಾಮಯ್ಯ ರವರಿಗೆ ಮೈಸೂರು ಲೋಕಸಭಾ ಕ್ಷೇತ್ರ ಪ್ರತಿಷ್ಟೆಯ ಕಣವಾಗಿತ್ತು. ಚುನಾವಣೆಯ ಆರಂಭದಲ್ಲಿ ಸಿದ್ದರಾಮಯ್ಯ ರವರ ಪುತ್ರ ಯತೀಂದ್ರ ರವರನ್ನು ಕಣಕ್ಕಿಳಿಸಲು ಕಾರ್ಯಕರ್ತರು ಸಿದ್ದರಾಮಯ್ಯನವರಿಗೆ ಒತ್ತಾಯ ಮಾಡಿದ್ದರು. ಆದರೆ ಮಗನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಸಿದ್ದರಾಮಯ್ಯ ಒಪ್ಪಲಿಲ್ಲ. ಒಕ್ಕಲಿಗ ಸಮುದಾಯದ ಪ್ರಬಲ ನಾಯಕನಾಗಿದ್ದ ಲಕ್ಷ್ಮಣ್ ರವರನ್ನೇ ಕಣಕ್ಕಿಳಿಸಿದರು. ಆದರೆ ಚುನಾವಣೆಯಲ್ಲಿ ಮೈಸೂರಿನ ಮತದಾರರು ಯದುವೀರ್ ರವರ ಕೈಹಿಡಿದಿದ್ದಾರೆ. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿದ್ದ ಪ್ರತಾಪ್ ಸಿಂಹ ರವರಿಗೆ ಈ ಬಾರಿ ಟಿಕೆಟ್ ನೀಡಿರಲಿಲ್ಲ. ಆದರೂ ಪ್ರತಾಪ್ ಸಿಂಹ ಹಾಗೂ ಬಿಜೆಪಿ ನಾಯಕರು ಯದುವೀರ್ ಪರ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿ ಗೆಲ್ಲಿಸಿದ್ದಾರೆ.