ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಭಿಯಾನ (Population Day) 2024 ಅನ್ನು ಆಯೋಜಿಸಲಾಗಿತ್ತು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನರಸಿಂಹಮೂರ್ತಿ, ಆಡಳಿತ ವೈದ್ಯಾಧಿಕಾರಿ ಡಾ.ಪ್ರದೀಪ್ ಸೇರಿದಂತೆ ವಿವಿಧ ಗಣ್ಯರು ಗುಡಿಬಂಡೆ ಮುಖ್ಯರಸ್ತೆಯಲ್ಲಿ ನಡೆಸಲಾದ ಜಾಥಾಗೆ ಹಸಿರು ಬಾವುಟ ತೋರುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಸಲಾದ ವೇದಿಕೆ ಕಾರ್ಯಕ್ರಮವನ್ನು (Population Day) ಗಣ್ಯರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಈ ಸಮಯದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನರಸಿಂಹಮೂರ್ತಿ ಮಾತನಾಡಿ ಸಂತಾನ ನಿಯಂತ್ರಣ ಕಾರ್ಯಕ್ರಮಗಳು ಗುಡಿಬಂಡೆ ತಾಲ್ಲೂಕಿನಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ನಮ್ಮ ಈ ಸಾಧನೆಗೆ ಸರ್ಕಾರ, ಜನಪ್ರತಿನಿಧಿಗಳ ಜೊತೆಗೆ ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರ ಸಾಮೂಹಿಕ ಸಹಕಾರವೂ ಮುಖ್ಯಪಾತ್ರ ವಹಿಸಿದೆ ಎಂದರು.
ಕುಟುಂಬ ಕಲ್ಯಾಣಾಧಿಕಾರಿ ಚಂದ್ರಶೇಖರ್ ಮಾತನಾಡಿ ಜನಸಂಖ್ಯಾ ನಿಯಂತ್ರಣದ ಕುರಿತು ನಾವು ಮಾಡುವ ಪ್ರಯತ್ನಗಳು ಅರ್ಥಪೂರ್ಣ ಹಾಗೂ ಧ್ಯೇಯದಿಂದ ಕೂಡಿರಬೇಕು. ಅವು ಕೇವಲ ವೇದಿಕೆ ಕಾರ್ಯಕ್ರಮಗಳಾಗಬಾರದು ಎಂದು ತಿಳಿಸಿದರು. ಆರೋಗ್ಯ ರಕ್ಷಾಸಮಿತಿಯ ಸದಸ್ಯರಾದ ಕೃಷ್ಣೇಗೌಡ ಜನಸಂಖ್ಯೆ ಹೆಚ್ಚಳದಿಂದ ದೇಶದಲ್ಲಿ ಆಗಬಹುದಾದ ಸಂಕಷ್ಟಗಳ ಕುರಿತು ಅರಿವು ಮೂಡಿಸಿದರು. ಇದೇ ಸಮಯದಲ್ಲಿ ಆರೋಗ್ಯ ರಕ್ಷಾಸಮಿತಿಯ ಸದಸ್ಯರಾದ ಬುಲೆಟ್ ಶ್ರೀನಿವಾಸ್, ನಿರ್ಮಲಮ್ಮ ಮಕ್ಕಳ ತಜ್ಞ ಡಾ. ವಿಜಯಕುಮಾರ್ ಮಾತನಾಡಿದರು.
ಈ ವೇಳೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನರಸಿಂಹಮೂರ್ತಿ, ಆಡಳಿತ ವೈದ್ಯಾಧಿಕಾರಿ ಡಾ. ಪ್ರದೀಪ್, ಕುಟುಂಬ ಕಲ್ಯಾಣಾಧಿಕಾರಿ ಚಂದ್ರಶೇಖರ್, ಮಕ್ಕಳ ತಜ್ಞ ಡಾ. ವಿಜಯಕುಮಾರ್, ಆರೋಗ್ಯ ನಿರೀಕ್ಷಣಾಧಿಕಾರಿ ನರಸಿಂಹಯ್ಯ, ಆರೋಗ್ಯ ರಕ್ಷಾಸಮಿತಿಯ ಸದಸ್ಯರಾದ ಬುಲೆಟ್ ಶ್ರೀನಿವಾಸ್, ಕೃಷ್ಣೇಗೌಡ, ರಹಮತುಲ್ಲಾ ಖಾನ್, ನಿರ್ಮಲಮ್ಮ, ಆರೋಗ್ಯ ರಕ್ಷಾಸಮಿತಿಯ ಮಾಜಿ ಸದಸ್ಯರಾದ ಶ್ರೀನಿವಾಸ ಗಾಂಧಿ, ಪ್ರಯೋಗ ಶಾಲಾ ತಂತ್ರಜ್ಞ ನಾಗರಾಜ್, ಆರೋಗ್ಯ ಕಾರ್ಯಕ್ರಮ ವ್ಯವಸ್ಥಾಪಕಿ ಮುಬಾರಕ್ ತಹಸಿನ್, ಆಶಾ ಕಾರ್ಯಕರ್ತೆಯರು, ಸಿಬ್ಬಂದಿಗಳು ಹಾಜರಿದ್ದರು.