West Bengal : ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ನಡೆದ ಹೃದಯ ಕಲಕುವ ಘಟನೆಯೊಂದು ಎಲ್ಲರನ್ನೂ ತಲ್ಲಣಗೊಳಿಸಿದೆ. “ಅಮ್ಮಾ, ನಾನು ಚಿಪ್ಸ್ ಕದ್ದಿಲ್ಲಮ್ಮಾ, ನನ್ನನ್ನು ಕ್ಷಮಿಸು” ಎಂದು ಡೆತ್‌ನೋಟ್ ಬರೆದಿಟ್ಟು, 7ನೇ ತರಗತಿ ಓದುತ್ತಿದ್ದ 13 ವರ್ಷದ ಕೃಷ್ಣೇಂದು ದಾಸ್ ಎಂಬ ಬಾಲಕ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾರ್ವಜನಿಕವಾಗಿ ಚಿಪ್ಸ್ ಕಳ್ಳನೆಂದು ಅವಮಾನಿಸಲ್ಪಟ್ಟಿದ್ದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
West Bengal : ಏನಿದು ಘಟನೆ? ಬಾಲಕನ ಸಾವಿಗೆ ಕಾರಣವೇನು?
ಪಶ್ಚಿಮ ಬಂಗಾಳದ ಪನ್ಸ್ಕುರಾ ಬಕುಲ್ಡಾ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಕೃಷ್ಣೇಂದು ದಾಸ್, ಭಾನುವಾರ ತಿಂಡಿ ತರಲು ಅಂಗಡಿಗೆ ಹೋಗಿದ್ದ. ಆ ಸಮಯದಲ್ಲಿ ಅಂಗಡಿಯಲ್ಲಿ ಯಾರೂ ಇರಲಿಲ್ಲ. ಅಂಗಡಿಯ ಹೊರಗೆ ಬಿದ್ದಿದ್ದ ಚಿಪ್ಸ್ ಪ್ಯಾಕೆಟ್‌ಗಳನ್ನು ನೋಡಿದ ಬಾಲಕ, ಅವುಗಳನ್ನು ಎತ್ತಿಕೊಂಡು ಮನೆಯತ್ತ ಹೆಜ್ಜೆ ಹಾಕಿದ್ದಾನೆ. ಆದರೆ, ಇದನ್ನು ನೋಡಿದ ಅಂಗಡಿ ಮಾಲೀಕ, ಸೈಕಲ್‌ನಲ್ಲಿ ಬಾಲಕನನ್ನು ಹಿಂಬಾಲಿಸಿದ್ದಾನೆ.
ಮೂಲಗಳ ಪ್ರಕಾರ, ಬಾಲಕ ಮಾಲೀಕನ ಬಳಿ ಕ್ಷಮೆಯಾಚಿಸಿ, 15 ರೂ. ಮೌಲ್ಯದ ಚಿಪ್ಸ್‌ಗೆ 20 ರೂ. ನೀಡಿದ್ದಾನೆ. ಆದರೂ, ಮಾಲೀಕ ಬಾಲಕನನ್ನು ಅಂಗಡಿಗೆ ಎಳೆದುಕೊಂಡು ಹೋಗಿ ಉಳಿದ ಚಿಲ್ಲರೆ ಹಣ ನೀಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ, ಬಾಲಕನನ್ನು ಸಾರ್ವಜನಿಕರ ಮುಂದೆ ಎಳೆದು, ಕಪಾಳಮೋಕ್ಷ ಮಾಡಿ, ಕಿವಿ ಹಿಡಿದು ಕ್ಷಮೆ ಕೇಳುವಂತೆ ಹೇಳಿ ಭಾರಿ ಅವಮಾನ ಮಾಡಿದ್ದಾನೆ ಎನ್ನಲಾಗಿದೆ.
West Bengal : ತಾಯಿಯಿಂದಲೂ ಗದರಿಕೆ, ಕೊನೆಗೆ ಕರಾಳ ನಿರ್ಧಾರ
ಘಟನೆ ತಿಳಿದ ನಂತರ, ಬಾಲಕನ ತಾಯಿಯೂ ಆತನನ್ನು ಮತ್ತೆ ಅಂಗಡಿಯ ಬಳಿ ಕರೆದುಕೊಂಡು ಹೋಗಿ ಗದರಿದ್ದಾರೆ. ಇದರಿಂದ ತೀವ್ರವಾಗಿ ನೊಂದಿದ್ದ ಕೃಷ್ಣೇಂದು, ಮನೆಗೆ ಬಂದ ತಕ್ಷಣ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಅಲ್ಲಿ, “ಅಮ್ಮಾ, ನಾನು ಚಿಪ್ಸ್ ಕದ್ದಿಲ್ಲಮ್ಮಾ, ನನ್ನನ್ನು ಕ್ಷಮಿಸು” ಎಂದು ಡೆತ್‌ನೋಟ್ ಬರೆದಿಟ್ಟು, ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೂಡಲೇ ಬಾಲಕನನ್ನು ತಮ್ಲುಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
West Bengal : ಅಂಗಡಿ ಮಾಲೀಕ ನಾಪತ್ತೆ: ತನಿಖೆ ಆರಂಭ
ಸದ್ಯ ಪಶ್ಚಿಮ ಬಂಗಾಳ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಂಗಡಿ ಮಾಲೀಕನಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಕೇಳಿಕೊಂಡಾಗ ಆತ ನಿರಾಕರಿಸಿದ್ದಾನೆ ಮಾತ್ರವಲ್ಲದೆ, ಕರೆಗಳಿಗೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಅಂಗಡಿ ಮಾಲೀಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
Read this also : Cardiac Arrest : 19ರ ಹರೆಯದಲ್ಲೇ ಇಬ್ಬರು ಯುವಕರ ದುರಂತ ಸಾವು – ಹೆಚ್ಚಿದ ಕಳವಳ!
ಈ ಘಟನೆ ಕುರಿತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಂಗಡಿ ಮಾಲೀಕನ ವರ್ತನೆ ಮತ್ತು ಬಾಲಕನಿಗೆ ಸಾರ್ವಜನಿಕವಾಗಿ ಮಾಡಿದ ಅವಮಾನವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಅಮಾಯಕ ಬಾಲಕನ ಸಾವು ಇಡೀ ಸಮಾಜಕ್ಕೆ ಒಂದು ಪಾಠವಾಗಿದ್ದು, ಮಕ್ಕಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಮತ್ತು ಮಾನವೀಯತೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಮಕ್ಕಳ ಮಾನಸಿಕ ಆರೋಗ್ಯ ಮತ್ತು ಅವರನ್ನು ಸೂಕ್ಷ್ಮವಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.