Traffic Rules ವಾಹನ ಸವಾರರು ಕೆಲವೊಮ್ಮೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣದಿಂದ ಅಂತಹ ಸವಾರರಿಗೆ ಪೊಲೀಸರು ದಂಡ ವಿಧಿಸುತ್ತಿರುತ್ತಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ತುಂಬಾನೆ ಪ್ರಯತ್ನಗಳನ್ನು ಸಹ ಮಾಡುತ್ತಿರುತ್ತಾರೆ. ಆದರೆ ಇದೀಗ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಮಹಿಳಾ ಪಿ.ಎಸ್.ಐ ಅಧಿಕಾರಿಯೊಬ್ಬರು ಹಿಡಿದು ದಂಡ ವಿಧಿಸಿದ್ದಾರೆ. ಬಳಿಕ ಆ ಪೊಲೀಸ್ ಅಧಿಕಾರಿ ದಂಡ ಕಟ್ಟಿಸಿಕೊಂಡ ಹಣ ವಾಪಸ್ಸು ಕೊಟ್ಟು, ಸಹೋದರಿಯಂತೆ ಪ್ರೀತಿಯ ಅಪ್ಪುಗೆ ಕೊಟ್ಟ ಸಂತೈಸಿದ್ದಾರೆ. ಅಷ್ಟಕ್ಕೂ ಆ ಮಹಿಳಾ ಪಿ.ಎಸ್.ಐ ಈ ರೀತಿ ಮಾಡಿದ್ದಾದರೂ ಏಕೆ ಎಂಬ ವಿಚಾರಕ್ಕೆ ಬಂದರೇ,
ಬಾಗಲಕೋಟ ಜಿಲ್ಲೆಯ ಇಲಕಲ್ ನಗರದಲ್ಲಿ ತ್ರಿಬಲ್ ರೈಡಿಂಗ್ ವೇಳೆ ಸಿಕ್ಕಿಬಿದ್ದ ವಿದ್ಯಾರ್ಥಿಗಳನ್ನು ತಡೆಹಿಡಿದು ಮಹಿಳಾ ಪಿಎಸ್‌ಐ ಎಸ್.ಆರ್.ನಾಯಕ ಎಂಬುವವರು ದಂಡ ಹಾಕಿದ್ದರು. ಬಾಲಕನಿಂದ ದಂಡವನ್ನು ಸಹ ಪೊಲೀಸರು ಕಟ್ಟಿಸಿಕೊಂಡಿದ್ದರು. ಬಾಲಕ ಕಟ್ಟಿದ ದಂಡ ತನ್ನ ಕಾಲೇಜು ಶುಲ್ಕ ಪಾವತಿ ಮಾಡಲು ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ವಿಚಾರವನ್ನು ಬಾಲಕ ಪೊಲೀಸ್ ಅಧಿಕಾರಿಗೆ ತಿಳಿಸಿದ್ದಾನೆ. ಬಾಲಕನ ಸ್ಥಿತಿಯನ್ನು ಕೇಳಿದ ಮಹಿಳಾ ಪೊಲೀಸ್ ಆತನಿಗೆ ದಂಡದ ಹಣವನ್ನು ವಾಪಸ್ಸು ನೀಡಿದ್ದಾರೆ. ದಂಡದ ಹಣ ಕಾಲೇಜು ಶುಲ್ಕಕ್ಕಾಗಿ ಇಟ್ಟುಕೊಂಡಿದ್ದಾನೆ ಎಂಬುದು ಖಾತರಿ ಮಾಡಿಕೊಂಡು ಪಿ.ಎಸ್.ಐ ಮಮ್ಮಲ ಮರುಗಿದ್ದಾರೆ.
ಬಳಿಕ ಬಾಲಕನಿಗೆ ದಂಡದ ಹಣ ವಾಪಸ್ಸು ಕೊಟ್ಟಿದ್ದಾರೆ. ಜೊತೆಗೆ ಹಿರಿಯ ಸಹೋದರಿಯಂತೆ ಪ್ರೀತಿಯಿಂದ ಅಪ್ಪುಗೆ ಕೊಟ್ಟು ಸಂತೈಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಪೊಲೀಸ್ ಅಧಿಕಾರಿಯ ಈ ಕೆಲಸಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ. ಇನ್ನೂ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ನೀಡಬಾರದು, ಜೊತೆಗೆ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲನೆ ಮಾಡಬೇಕು. ಸಂಚಾರಿ ನಿಯಮಗಳು ಪಾಲನೆ ಮಾಡುವುದರಿಂದ ಅಪಘಾತಗಳನ್ನು ತಡೆಯಬಹುದಾಗಿದೆ.