Tirupati – ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನದ ಟಿಕೆಟ್ ಪಡೆಯಲು ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಈ ಸಮಯದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಸುಮಾರು ಮಂದಿಗೆ ಗಾಯಗಳಾಗಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಭಕ್ತಾದಿಗಳು ತಿರುಪತಿಯ ವೈಕುಂಠ ದ್ವಾರ ದರ್ಶನದ ಟಿಕೆಟ್ ತೆಗೆದುಕೊಳ್ಳುವ ವೇಳೆ ನೂಕು ನುಗ್ಗಲು ಉಂಟಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ತಿರುಮಲದ ವೈಕುಂಠ ದ್ವಾರ ಸರ್ವದರ್ಶನ ಟೋಕನ್ ಗಳನ್ನು ತೆಗೆದುಕೊಳ್ಳುವಾಗ ಈ ನೂಕು ನುಗ್ಗಲು ಸಂಭವಿಸಿದೆ. ತಿರುಪತಿಯ ವಿಷ್ಣು ನಿವಾಸದ ಬಳಿ ದರ್ಶನದ ಟಿಕೆಟ್ ಗಳನ್ನು ಪಡೆದುಕೊಳ್ಳಲು ಭಕ್ತರು ಜಮಾಯಿಸಿದ್ದಾರೆ. ಟಿಕೆಟ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಏಕಕಾಲಕ್ಕೆ ಸಾವಿರಾರು ಮಂದಿ ನುಗ್ಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ನೂಕು ನುಗ್ಗಲಿನಲ್ಲಿ ತಮಿಳುನಾಡು ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಮತ್ತಷ್ಟು ಮಂದಿ ಗಾಯಗೊಂಡಿದ್ದು, ಈ ಪೈಕಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜನವರಿ 10 ರಂದು ವೈಕುಂಠ ಏಕಾದಶಿಯ ಹಿನ್ನಲೆಯಲ್ಲಿ ತಿರುಪತಿಯ ಕೌಂಟರ್‌ಗಳಲ್ಲಿ ಇಂದು ಟಿಕೆಟ್ ವಿತರಣೆ ಮಾಡಲಾಗುತ್ತಿತ್ತು. ಈ ವೇಳೆ ಸಾವಿರಾರು ಮಂದಿ ಏಕಕಾಲಕ್ಕೆ ಕೌಂಟರ್ ಬಳಿ ನುಗ್ಗಿದಾಗ ಕಾಲ್ತುಳಿತ ಸಂಭವಿಸಿದೆ. ಇದರ ವಿಡಿಯೋಗಳು ಕೂಡ ತುಂಬಾ ಭಯಾನಕವಾಗಿದೆ ಎನ್ನಲಾಗಿದೆ. ನೆಲದಲ್ಲಿ ಬಿದ್ದ ವ್ಯಕ್ತಿಗಳನ್ನು ಬದುಕಿಸಲು ಪೊಲೀಸರು ಸಿಪಿಆರ್ ನಡೆಸುತ್ತಿರುವ ದೃಶ್ಯಗಳೂ ಸಹ ಹರಿದಾಡುತ್ತಿವೆ. ಇನ್ನೂ ವಿಷ್ಣು ನಿವಾಸಂ ಕೌಂಟರ್‌ನ 9 ಕೇಂದ್ರದ 94 ಕೌಂಟರ್‌ಗಳಲ್ಲಿ ಟಿಕೆಟ್ ಮಾರಾಟ ಮಾಡಲು ಟಿಟಿಡಿ ನಿರ್ಧಾರ ಮಾಡಿತ್ತು. ಟಿಕೆಟ್ ಮಾರಾಟ ಪ್ರಕ್ರಿಯೆ ಆರಂಭವಾಗಲು ಇನ್ನೂ ಸಮಯವಿದ್ದ ಕಾರಣ ಪೊಲೀಸರು ಕೂಡ ಎಚ್ಚರಿಕೆಯಿಂದ ಕ್ಯೂ ಮೇಂಟೇನ್ ಮಾಡಲು ಕಾರ್ಯನಿರ್ವಹಿಸಿದ್ದರು. ರಸ್ತೆಗಳಲ್ಲಿಯೇ ನಿಂತು ಭಕ್ತರು ಗೋವಿಂದ ಭಜನೆ ಮಾಡುತ್ತಿದ್ದರು. ಇನ್ನೂ ಉಚಿತ ದರ್ಶನ ಟಿಕೆಟ್‌ಗಾಗಿ ದೊಡ್ಡ ಪ್ರಮಾಣದಲ್ಲಿ ಭಕ್ತರು ಕೌಂಟರ್ ಎದುರು ಜಮಾಯಿಸಿದ್ದಾರೆ. ಗುರುವಾರ ಮುಂಜಾನೆ 5 ಗಂಟೆಯ ಬದಲಿಗೆ, ಮಧ್ಯರಾತ್ರಿ 12 ಗಂಟೆಯಿಂದಲೇ ಟಿಕೆಟ್ ವಿತರಣೆ ಆರಂಭವಾಗಲಿದೆ ಎಂಬ ಮಾಹಿತಿಯೊಂದು ಹರಿದಾಡಿತ್ತು. ಈ ಕಾರಣದಿಂದ ಹೆಚ್ಚು ಜನರು ಜಮಾಯಿಸಿದ ಕಾರಣ ನೂಕುನುಗ್ಗಲು ಸಂಭವಿಸಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ: ಇನ್ನೂ ಈ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. ತಿರುಮಲ ವೆಂಕಟೇಶ್ವರ ಸ್ವಾಮಿ ವೈಕುಂಠ ದರ್ಶನಕ್ಕೆ ಟಿಕೆಟ್ ನೀಡುವ ಕೌಂಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಕೆಲ ಭಕ್ತರು ಸಾವನ್ನಪ್ಪಿರುವುದು ದುರದೃಷ್ಟಕರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ. ಅಲ್ಲದೆ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಅವರು ತಮ್ಮ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದಾರೆ.
ತೀವ್ರ ಆಘಾತ ವ್ಯಕ್ತಪಡಿಸಿದ ಆಂಧ್ರ ಸಿಎಂ: ತಿರುಪತಿಯ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆ ಕುರಿತು ದೂರವಾಣಿ ಮೂಲಕ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ ಎನ್ನಲಾಗಿದ್ದು, ಇಂದು ತಿರುಪತಿಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಸಂತಾಪ: ಇನ್ನೂ ತಿರುಪತಿಯಲ್ಲಿ ಸಂಭವಿಸಿದ ದುರಂತ ಕಾಲ್ತುಳಿತವು ತುಂಬಾ ದುಃಖಕರವಾದ ವಿಚಾರವಾಗಿದೆ. ಈ ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ನನ್ನ ಸಂತಾಪಗಳು. ಘಟನೆಯಲ್ಲಿ ಗಾಯಗೊಂಡವರೆಲ್ಲಾ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ಕಷ್ಟದ ಸಮಯದಲ್ಲಿ ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ನಾನು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಕೋರುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಕ್ಸ್(ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದಾರೆ.