Love – ಪ್ರೇಮ ವೈಫಲ್ಯ, ಪ್ರೀತಿಯಲ್ಲಿ ಮೋಸದ ಕಾರಣದಿಂದ ಅನೇಕರು ಸಾಯುವಂತಹ ದೊಡ್ಡ ತೀರ್ಮಾನಕ್ಕೆ ಬರುತ್ತಾರೆ. ಅದರಲ್ಲೂ ಕೆಲವರಂತೂ ಕ್ಷುಲ್ಲಕ ಕಾರಣಗಳಿಂದ ಸಾವಿದ ಕದ ತಟ್ಟುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ತನ್ನ ಪ್ರಿಯಕರ ಬೇರೆ ಹುಡುಗಿಯ ಜೊತೆಗೆ ಮಾತನಾಡಿದ್ದ ಎಂಬ ಕಾರಣದಿಂದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ. ಮೃತ ದುರ್ದೈವಿಯನ್ನು ಸುಚಿತ್ರಾ (17) ಎಂದು ಗುರ್ತಿಸಲಾಗಿದೆ. ಮೃತ ದುರ್ದೈವಿ ಸುಚಿತ್ರಾ ಆದರ್ಶ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರ್ಶ ಪೊಟೋಗ್ರಾಫರ್ ಆಗಿದ್ದು, ಕಳೆದ ಒಂದು ವರ್ಷದಿಂದ ಇಬ್ಬರೂ ಪ್ರೀತಿಸಿಕೊಳ್ಳುತ್ತಿದ್ದರಂತೆ. ಆದರೆ ಕೆಲವು ದಿನಗಳಿಂದ ಯುವಕ ಬೇರೊಬ್ಬ ಯುವತಿಯ ಜೊತೆಗೆ ಚಾಟಿಂಗ್ ಮಾಡಿಕೊಂಡು ಆಕೆಯೊಂದಿಗೆ ಆತ್ಮೀಯವಾಗಿದ್ದನಂತೆ. ಈ ಕಾರಣದಿಂದ ಸುಚಿತ್ರಾ, ಆದರ್ಶ ಜೊತೆಗೆ ಗಲಾಟೆ ಮಾಡಿಕೊಂಡಿದ್ದಳು ಎನ್ನಲಾಗಿದೆ.
ಇನ್ನೂ ಸುಚಿತ್ರಾ ತನ್ನ ಪ್ರಿಯಕರನಾದ ಆದರ್ಶ ಜೊತೆಗೆ ಫೆ.23 ರಂದು ಜಗಳವಾಡಿದ್ದಳಂತೆ. ಆದರ್ಶ ಬೇರೆ ಯುವತಿಯ ಜೊತೆ ಮಾತನಾಡುತ್ತಿದ್ದಾನೆ ಎಂದು ಕೋಪ ಮಾಡಿಕೊಂಡಿದ್ದಳಂತೆ. ಬಳಿಕ ಸುಚಿತ್ರಾ ತನ್ನ ಮನೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ತನ್ನ ಪ್ರಿಯಕರನ ನಡೆಯಿಂದ ಬೇಸರಗೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.