ಕಳೆದ 2020ರ ಕೋವಿಡ್ ಸಾಂಕ್ರಾಮಿಕ ರೋಗ ಹರಡುವಿಕೆಯ ಸಮಯದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ (BSY) ಹಾಗೂ ಮಾಜಿ ಸಚಿವ ಶ್ರೀರಾಮುಲು ವಿರುದ್ದ ಕರ್ನಾಟಕ ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ ಅಸ್ತ್ರ ಪ್ರಯೋಗಿಸಲು ತಯಾರಿ ನಡೆಸಿದೆ ಎಂದು ಹೇಳಲಾಗುತ್ತಿದೆ. ನ್ಯಾ.ಮೈಕಲ್ ಡಿ ಕುನ್ನಾ ವರದಿ ಆಧಾರದ ಮೇರೆಗೆ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಕೋವಿಡ್ ಸಮಯದಲ್ಲಿ ಚೀನಾದಿಂದ ಪಿಪಿಇ ಕಿಟ್ ಖರೀದಿಸಿದ ವಿಚಾರ ಇದೀಗ ರಾಜ್ಯ ಕಾಂಗ್ರೇಸ್ ಸರ್ಕಾರಕ್ಕೆ ಬ್ರಹ್ಮಾಸ್ತ್ರ ದೊರೆತಂತಾಗಿದೆ. ನ್ಯಾ.ಮೈಕಲ್ ಡಿ ಕುನ್ನಾ ವರದಿಯಲ್ಲಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸ್ ದಾಖಲಿಸಿ ತನಿಖೆಗೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. 2020 ಏಪ್ರಿಲ್‍ನಲ್ಲಿ ಚೀನಾದ ಎರಡು ಕಂಪನಿಗಳಿಂದ ಪಿಪಿಇ ಕಿಟ್ ಖರೀದಿಸುವಲ್ಲಿ ಅಕ್ರಮ ಎಸಗಲಾಗಿದೆ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದ್ದು, ಅಂದಿನ ಸಿಎಂ, ಅಂದಿನ ಆರೋಗ್ಯ ಸಚಿವರ ವಿರುದ್ಧ ತನಿಖೆಗೆ ಶಿಫಾರಸು ಮಾಡಲಾಗಿದೆ. ಉಪಚುನಾವಣೆ ಮುಗಿದ ಬಳಿಕ ರಾಜ್ಯ ಸರ್ಕಾರದಿಂದ ಮುಂದಿನ ಪ್ರಕ್ರಿಯೆಯ ಬಗ್ಗೆ ತೀರ್ಮಾನಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾಂಗ್ರೆಸ್ ನವರ ಗೊಡ್ಡು ಬೆದರಿಕೆಗೆ ನಾವು ಜಗ್ಗಲ್ಲ ಎಂದ ಮಾಜಿ ಸಚಿವ ಶ್ರೀರಾಮುಲು
ಬಳ್ಳಾರಿಯ ಸಂಡೂರು ಕ್ಷೇತ್ರದ ಬನ್ನಿಹಟ್ಟಿ ಗ್ರಾಮದಲ್ಲಿ ಸಂಡೂರು ಉಪಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು ಕಾಂಗ್ರೇಸ್ ನವರ ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗಲ್ಲ. ರಾಜ್ಯ ಸರ್ಕಾರ ಒಂದೂ ವರ್ಷಗಳ ಕಾಲ ಸುಮ್ಮನಿದ್ದು, ಇದೀಗ ಸಿದ್ದರಾಮಯ್ಯ ಹಗರಣಗಳನ್ನು ಮುಚ್ಚಿ ಹಾಕಲು ಯಡಿಯೂರಪ್ಪಹಾಗೂ ನನ್ನ ಮೇಲೆ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಲು ಹೊರಟಿದ್ದಾರೆ. ನಾನು ಸಚಿವನಾಗಿದ್ದ ಅವಧಿಯಲ್ಲಿ ಕರೋನಾ ಕಲಬುರಗಿಯಿಂದ ರಾಜ್ಯದ ತುಂಬೆಲ್ಲಾ ಹಬ್ಬಿತ್ತು. ನಾನು ಆರೋಗ್ಯ ಸಚಿವನಾಗಿದ್ದೆ. ಟಾಸ್ಕ್ ಫೋರ್ಸ್ ಮಾಡಿಕೊಂಡು, ಕೆಲಸ ಮಾಡಿದ್ದೇವೆ. ರಾಜ್ಯ ಸರ್ಕಾರ ಮಾಡುತ್ತಿರುವ ಭ್ರಷ್ಟಾಚಾರ ಮುಚ್ಚಿಹಾಕಲು ಪ್ರಾಸಿಕ್ಯೂಷನ್ ಗೆ ಶಿಫಾರಸ್ಸು ಮಾಡಲು ಹೊರಟಿದ್ದಾರೆ. ಆದರೆ ಇಂತಹ ಗೊಡ್ಡು ಬೆದರಿಕೆಗೆ ನಾವು ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಗುಡುಗಿದ್ದಾರೆ.