ಇಂದಿನ ಕಾಲದಲ್ಲಿ ತಾಜ್ಯ ವಿಲೇವಾರಿ ಎಂಬುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ, ತಾಜ್ಯ ವಿಲೇವಾರಿಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದರೂ, ಎಚ್ಚರಿಕೆ ನೀಡಿದರೂ, ಕೆಲವರು ಮಾತ್ರ ಕಸವನ್ನು ಸರಿಯಾಗಿ ವಿಲೇವಾರಿ ಮಾಡದೇ ಎಲ್ಲೆಂದರೆ ಅಲ್ಲಿ ಎಸೆಯುವ ಚಾಳಿ ಮಾತ್ರ ಬಿಟ್ಟಿಲ್ಲ. ಇದರಿಂದ ಜನರ ಆರೋಗ್ಯ ಕಡೆವುದು ಮಾತ್ರವಲ್ಲದೇ ಪ್ರಾಣಿ ಪಕ್ಷಿಗಳಿಗೂ ಸಹ ಸಮಸ್ಯೆಯಾಗುತ್ತದೆ. ಇದೀಗ ಹಾವೊಂದು ಅದೇ ರೀತಿಯ ಸಮಸ್ಯೆಯನ್ನು ಅನುಭವಿಸಿದೆ. ಆಹಾರವೆಂದು ಭಾವಿಸಿ ಸಿರಪ್ ಬಾಟಲ್ ಒಂದನ್ನು ನುಂಗಿ ಇನ್ನಿಲ್ಲದ ಸಮಸ್ಯೆಯನ್ನು ಅನುಭವಿಸಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ.
ನಾಗರಹಾವೊಂದು ಆಹಾರವೆಂದು ಭಾವಿಸಿ ರಸ್ತೆಯಲ್ಲಿ ಎಸೆದಿದ್ದ ಸಿರಪ್ ಬಾಟಲಿಯನ್ನು ನುಂಗಿ ಪರದಾಡಿದಂತಹ ಘಟನೆಯೊಂದು ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಬಾಟಲ್ ನುಂಗಿ ಸಮಸ್ಯೆ ಪಡುತ್ತಿದ್ದನ್ನು ನೋಡಿ ಸ್ನೇಕ್ ಹೆಲ್ಪ್ ಲೈನ್ ಗೆ ಸುದ್ದಿ ತಿಳಿಸಿದ್ದು, ಬಂದ ಸಿಬ್ಬಂದಿ ಬಾಟಲಿಯನ್ನು ಹೊರ ತೆಗೆದಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾಗರಹಾವೊಂದು ಸಿರಪ್ ಬಾಟಲಿಯನ್ನು ನುಂಗಿ, ಉಸಿರಾಡುವುದಕ್ಕೂ ಆಗದೇ ಪ್ರಾಣ ಸಂಕಟದಲ್ಲಿ ಸಿಲುಕಿಗೆ. ಬಳಿಕ ಸ್ನೇಕ್ ಹೆಲ್ಪ್ ಲೈನ್ ಸಿಬ್ಬಂದಿಯೊಬ್ಬರು ಬಂದು ಬಾಟಲಿಯನ್ನು ಯಶಸ್ವಿಯಾಗಿ ಹೊರತೆಗೆದು ಮೂಕ ಪ್ರಾಣಿಯ ಜೀವ ಉಳಿಸಿದ್ದಾರೆ. ಈ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಸಾಂತ ನಂದಾ ಎಂಬುವವರು ತಮ್ಮ ಎಕ್ಸ್ ಖಾತೆ (Susantananda3)ಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಲು ಕ್ಲಿಕ್ ಮಾಡಿ: https://x.com/susantananda3/status/1808421554994241554
ಅರಣ್ಯಾಧಿಕಾರಿ ಸುಸಾಂತ ನಂದಾ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಸ್ನೇಕ್ ಹೆಲ್ಪ್ ಲೈನ್ ಸಿಬ್ಬಂದಿ ನಾಗರ ಹಾವಿನ ಗಂಟಲಲ್ಲಿ ಸಿಲುಕಿದ್ದ ಕೆಮ್ಮಿನ ಸಿರಪ್ ಬಾಟಲಿಯನ್ನು ಹೊರತೆಗೆದು ಮುಗ್ದ ಪ್ರಾಣಿಯ ಜೀವ ರಕ್ಷಣೆ ಮಾಡಿದ್ದಾರೆ ಎಂದು ಟೈಟಲ್ ಕೊಟ್ಟು ವಿಡಿಯೋ ಹಂಚಿಕೊಂಡಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಹಂಚಿಕೊಳ್ಳಲಾದ ಈ ಪೋಸ್ಟ್ ಲಕ್ಷಗಟ್ಟಲೇ ವ್ಯೂಸ್ ಕಂಡಿದೆ. ಜನರು ಬೇಜವಾಬ್ದಾರಿ ತೋರಿ ಕಸವನ್ನು ಸರಿಯಾಗಿ ವಿಲೇವಾರಿ ಮಾಡದೇ ಇರುವುದರಿಂದ ಜನರಿಗೆ ಮಾತ್ರವಲ್ಲದೇ ಪ್ರಾಣಕ್ಕೂ ಸಹ ಕಂಟಕವಾಗಿದೆ. ಜನರು ಎಚ್ಚೆತ್ತುಕೊಂಡು ಪರಿಸರವನ್ನು ಕಾಪಾಡಬೇಕು. ಕಸವನ್ನು ಸರಿಯಾಗಿ ವಿಲೇವಾರಿ ಮಾಡಬೇಕು ಎಂದು ಪ್ರಜ್ಞಾವಂತರು ಸಲಹೆ ನೀಡುತ್ತಿದ್ದಾರೆ.