School Day – ತಮ್ಮ ಮಕ್ಕಳಿಗೆ ಆಸ್ತಿಯನ್ನು ಮಾಡುವ ಬದಲಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ ತಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿಸುವಂತಹ ಕೆಲಸಕ್ಕೆ ಪೋಷಕರು ಮುಂದಾಗಬೇಕಾದ ಅಗತ್ಯವಿದೆ ಎಂದು ಶಾಂತಿನಿಕೇತನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಿವಿ ಮಾತು ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಶಾಂತಿ ನಿಕೇತನ್ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಶಾಂತಿನಿಕೇತನ್ ಶಾಲೆಯ 25ನೇ ವಾರ್ಷಿಕೋತ್ಸವದ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳ ಭಾವಚಿತ್ರವುಳ್ಳ ಕ್ಯಾಲೆಂಡರ್‍ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸುಮಾರು 7 ವರ್ಷಗಳ ಕಾಲ ಕೆ.ವಿ.ಲಕ್ಷಮ್ಮಯ್ಯ ರವರು ಶಾಂತಿನಿಕೇತನ್ ಶಾಲೆಯನ್ನು ನಡೆಸಿಕೊಂಡುಬರುತ್ತಿದ್ದರು ನಂತರ ನಾನು ಮತ್ತು ಚಿಕ್ಕನರಸಿಂಹಯ್ಯ ನವರು ಸುಮಾರು 18 ವರ್ಷಗಳಿಂದ ಈ ವಿದ್ಯಾಸಂಸ್ಥೆಯನ್ನು ನಡೆಸಿಕೊಂಡು ಬರುತ್ತೇವೆ. ಯಾವುದೇ ಲಾಭದ ದೃಷ್ಠಿಯಿಂದ ನಾವು ಈ ಶಾಲೆಯನ್ನು ಪ್ರಾರಂಭಿಸಿಲ್ಲ, ಈ ಭಾಗದ ಬಡವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಏಕೈಕ ಉದ್ದೇಶದಿಂದ ಪ್ರಾರಂಭಿಸಿದ್ದೇವೆ ಎಂದ ಅವರು ಈ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳಲ್ಲಿ ನಮ್ಮ ಶಾಂತಿನಿಕೇತನ್ ವಿದ್ಯಾ ಸಂಸ್ಥೆ ಮೊದಲನೆಯ ಸ್ಥಾನದಲ್ಲಿ ಇರಬೇಕು ಎನ್ನುವುದೇ ನಮ್ಮ ಆಸೆಯಾಗಿದೆ ನಮ್ಮ ಆಸೆಯನ್ನು ಈಡೇರಿಸುವಲ್ಲಿ ಶಿಕ್ಷಕರು,ವಿದ್ಯಾರ್ಥಿಗಳು ಸೇರಿದಂತೆ ಪೋಷಕರ ಸಹಕಾರ ಮುಖ್ಯ ಎಂದರು.

ಇತ್ತೀಚಿನ ದಿನಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ನೋಡುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು ಮಕ್ಕಳು ಮೊಬೈಲ್ ಬಳಕೆಯಿಂದ ದೂರಸರಿದು ವ್ಯಾಸಂಗದ ಕಡೆ ಹೆಚ್ಚಿನ ಗಮನಹರಿಸಬೇಕೆಂದ ಅವರು ಪರೀಕ್ಷೆ ಸಮಯದಲ್ಲಿ ಮನೆಯಲ್ಲಿ ಪೋಷಕರು ಟಿ.ವಿ ನೋಡುವುದು, ಮೊಬೈಲ್ ಬಳಸುವುದನ್ನು ಕಡಿಮೆ ಮಾಡುವ ಮೂಲಕ ಮಕ್ಕಳ ಓದುವುದಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ ಅವರು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಿದಾಗ ಮಾತ್ರ ಯಾವುದೇ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.
ಬಳಿಕ ಜಿ.ಪಂ ಮಾಜಿ ಅಧ್ಯಕ್ಷರು ಹಾಗೂ ಶಾಂತಿ ನಿಕೇತನ್ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ(ಚಿನ್ನಿ) ಮಾತನಾಡಿ, ಕಷ್ಟಪಟ್ಟು ಓದುವುದು ಬೇಡ ಇಷ್ಟಪಟ್ಟು ಓದುವುದನ್ನು ಬಾಲ್ಯದಿಂದಲ್ಲೇ ಅಭ್ಯಾಸ ಮಾಡಿಕೊಳ್ಳುವುದರ ಜೊತೆಗೆ ಸಾಧನೆ ಮಾಡಬೇಕೆನ್ನುವ ಗುರಿ, ಪರಿಶ್ರಮ ಹಾಗೂ ಶಿಸ್ತು, ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುವುದನ್ನು ಕಲಿಯುವುದು ಮುಖ್ಯ ಎಂದ ಅವರು ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಪೋಷಕರ ಪಾತ್ರವು ಅಷ್ಟೇ ಮುಖ್ಯ. ಈ ಭಾಗದ ಬಡವರ ಮಕ್ಕಳಿಕೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ನಾನು ಮತ್ತು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸೇರಿ ಇಲ್ಲಿ ವಿದ್ಯಾಸಂಸ್ಥೆ ಪ್ರಾರಂಭಿಸಿದ್ದೇವೆ, ಮುಂದಿನ ದಿನಗಳಲ್ಲಿ ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನಕ್ಕೇರುವ ಆಶಯ ಹೊಂದಿರುವುದಾಗಿ ತಿಳಿಸಿದರು.

ಇದೇ ವೇಳೆ ಶಾಲೆಯ ಮಕ್ಕಳಿಂದ ನಾಟಕ, ನೃತ್ಯ ಇತ್ಯಾದಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರದರ್ಶನ ಮಾಡಿದರು. ಇದೇ ಸಮಯದಲ್ಲಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿರುವ ಪಿ.ಎ.ಗೋಪಾಲ್ ರವರನ್ನು ಶಾಲೆಯ ಆಡಳಿತ ಮಂಡಳಿವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಪುರಸಭೆ ಸದಸ್ಯ ನಂಜುಂಡಪ್ಪ, ಯಂಗ್ ಇಂಡಿಯಾ ಶಾಲೆ ವ್ಯವಸ್ಥಾಪಕ ಪ್ರೋ.ಡಿ.ಶಿವಣ್ಣ, ಬಿಇಒ ವೆಂಕಟೇಶಪ್ಪ, ಸಿ.ಎಂ ಕಚೇರಿಯಲ್ಲಿ ವಿಷೇಶ ಅಧಿಕಾರಿ ಕೆ.ವೆಂಕಟೇಶ್, ಶಾಂತಿ ನಿಕೇತನ್ ಶಾಲೆಯ ಆಡಳಿತ ಮಂಡಳಿಯ ಡಿ.ಎನ್.ರಘುನಾಥ್, ಪ್ರಾಂಶುಪಾಲ ಬಿ.ಆರ್.ನವೀನ್ ಕುಮಾರ್ ಮತ್ತಿತರರು ಇದ್ದರು.