Ayyappaswami – ಪ್ರತೀ ವರ್ಷದ ಅಂತ್ಯದಲ್ಲಿ ಅಯ್ಯಪ್ಪಸ್ವಾಮಿಯ ಭಕ್ತರು ಶ್ರದ್ದಾಭಕ್ತಿಯಿಂದ ಅಯ್ಯಪ್ಪಮಾಲೆ ಧರಿಸಿ, ಶಬರಿಮಲೆಯಲ್ಲಿ ನೆಲೆಸಿರುವ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಾರೆ. ಅಯ್ಯಪ್ಪನ ಭಕ್ತರಿಗೆ ಸ್ವಾಮಿಯ ಮಹಿಮೆ ಪ್ರತ್ಯಕ್ಷವಾಗುತ್ತದೆ. ಕೆಲವೊಮ್ಮೆ ಹಲವು ರೂಪಗಳಲ್ಲಿ ಅಯ್ಯಪ್ಪನ ದರ್ಶನ ಸಹ ಆಗಿದೆ ಎಂಬ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಪುತ್ತೂರಿನಲ್ಲಿ ಪವಾಡವೊಂದು ನಡೆದಿದೆ. ಮಾತನಾಡಲು ಬರದಂತಹ ಬಾಲಕನೋರ್ವನಿಗೆ ಪವಾಡ ಎಂಬಂತೆ ಅಯ್ಯಪ್ಪನ ಮಾಲೆ ಧರಿಸಿದ ಬಳಿಕ ಮಾತನಾಡಲು ಆರಂಭಿಸಿದ್ದಾನೆ. ಈ ಘಟನೆ ಎಲ್ಲರಿಗೂ ಅಚ್ಚರಿ ತಂದಿದೆ ಎನ್ನಲಾಗುತ್ತಿದೆ.
ಅಯ್ಯಪ್ಪನ ಮಹಿಮೆ ಎಂಬ ಸಿನೆಮಾದಲ್ಲಿ ಮಾತು ಬಾರದ ಬಾಲಕನಿಗೆ ಅಯ್ಯಪ್ಪನ ದರ್ಶನದ ಬಳಿಕ ಮಾತು ಬರುತ್ತದೆ. ಇದೀಗ ಅದೇ ರೀತಿಯ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಾಮೆತ್ತಡ್ಕ ಎಂಬಲ್ಲಿ ನಡೆದಿದೆ ಎನ್ನಲಾಗಿದೆ. ಸಾಮೆತ್ತಡ್ಕ ನಿವಾಸಿ ಪ್ರಸನ್ನ ಎಂಬ ಬಾಲಕನಿಗೆ ಸರಿಯಾಗಿ ಮಾತನಾಡಲು ಬರುತ್ತಿರಲ್ಲವಂತೆ. ಅಂದರೇ ಕೈ ಸನ್ನೆಯ ಮೂಲಕ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಕಳೆದ ವರ್ಷ ಸಹ ಅಯ್ಯಪ್ಪನ ಮಾಲೆ ಧರಿಸಿ ದೇವರ ದರ್ಶನ ಪಡೆದಿದ್ದ. ಒಂದು ವರ್ಷದ ಹಿಂದೆ ಒಂದು ಶಬ್ದ ಮಾತನಾಡಲೂ ಆಗದಂತಹ ಈ ಬಾಲಕ ಇದೀಗ ಅಯ್ಯಪ್ಪ ಸ್ವಾಮಿಯ ಶರಣು ಎಂದು ಹೇಳುತ್ತಿದ್ದಾನೆ. ಶಬ್ದಗಳು ಅಷ್ಟು ಸ್ಪಷ್ಟವಾಗಿಲ್ಲದಿದ್ದರೂ, ಅರ್ಥವಾಗುತ್ತದೆ. ಈ ಬಾರಿ ಮತ್ತೆ ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಏರಲು ಸಿದ್ಧತೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಇನ್ನೂ ಪ್ರಸನ್ನನಿಗೆ ತೊದಲು ಮಾತುಗಳು ಬರುತ್ತಿದ್ದನ್ನು ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗುರುಸ್ವಾಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಪವಾಡಗಳು ಅಯ್ಯಪ್ಪನ ಮಹಿಮೆಯಿಂದ ಸಾಧ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹಿರಿಯ ಅಯ್ಯಪ್ಪನ ಮಾಲಾಧಾರಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನೂ ಪ್ರಸನ್ನ ಪುತ್ತೂರಿನ ಮಹಾಲಿಂಗೇಶ್ವರ ಐಟಿಐ ಕಾಲೇಜಿನಲ್ಲಿ ಎರಡನೇ ವರ್ಷದ ಡಿಪ್ಲೋಮಾದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಒಂದು ವರ್ಷದ ಹಿಂದೆ ಒಂದು ಮಾತನ್ನೂ ಆಡದಂತಹ ಸ್ಥಿತಿಯಲ್ಲಿದ್ದ ಪ್ರಸನ್ನ ಇದೀಗ ತೊದಲು ಮಾತುಗಳನ್ನಾಡುತ್ತಿದ್ದಾನೆ. ಆತನ ಮೇಲೆ ಅಯ್ಯಪ್ಪ ಸ್ವಾಮಿಯ ಕೃಪೆಯಿದೆ ಎಂದು ಅನೇಕರು ಭಾವಿಸುತ್ತಿದ್ದಾರೆ.