ಹೆಣ್ಣುಮಕ್ಕಳನ್ನು ‘ಮನೆಯ ಮಹಾಲಕ್ಷ್ಮಿ’ ಎಂದು ಸಂಭ್ರಮಿಸುವ ಈ ಕಾಲದಲ್ಲೂ, ಹೆಣ್ಣುಮಗು ಹುಟ್ಟಿದರೆ ಶಾಪ ಎಂಬಂತೆ ನೋಡುವ ಅಮಾನವೀಯ ಮನಸ್ಥಿತಿಗಳು ಇನ್ನೂ ಜೀವಂತವಾಗಿವೆ. ಒಡಿಶಾದಲ್ಲಿ (Odisha Couple Attacked) ಇಂತಹದ್ದೇ ಒಂದು ಘೋರ ಘಟನೆ ಬೆಳಕಿಗೆ ಬಂದಿದೆ. ಸೊಸೆಗೆ ಅವಳಿ ಹೆಣ್ಣುಮಕ್ಕಳು ಹುಟ್ಟಿದರು ಎಂಬ ಕಾರಣಕ್ಕೆ ಹಾಗೂ ವರದಕ್ಷಿಣೆ ಆಸೆಯಿಂದ, ಹೆತ್ತ ಮಗ ಮತ್ತು ಸೊಸೆಯ ಮೇಲೆಯೇ ಅತ್ತೆ-ಮಾವ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

Odisha Couple Attacked – ವರದಕ್ಷಿಣೆ ಕಿರುಕುಳದ ಆರಂಭ
ಒಡಿಶಾದ ಮಹಾಂಗ ಪೊಲೀಸ್ ಠಾಣಾ ವ್ಯಾಪ್ತಿಯ ಪಸುಲುಂಡ ಗ್ರಾಮದ ನಿವಾಸಿಗಳಾದ ಚಂದ್ರಶೇಖರ್ ಜೇನಾ (23) ಹಾಗೂ ಪಾರ್ವತಿ ಜೇನಾ (21) ಅವರಿಗೆ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು. ಮದುವೆಯಾದ ದಿನದಿಂದಲೇ ಅತ್ತೆ ಮಂಜುಲತಾ ಮತ್ತು ಮಾವ ಸಾಮೂಲ್ಯ, ಹೆಚ್ಚಿನ ವರದಕ್ಷಿಣೆ ತರುವಂತೆ ಸೊಸೆಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಶುರುಮಾಡಿದ್ದರು.
ಅವಳಿ ಹೆಣ್ಣುಮಕ್ಕಳು ಹುಟ್ಟಿದ್ದೇ ದೊಡ್ಡ ಅಪರಾಧವಾ?
ವರದಕ್ಷಿಣೆ ದಾಹದ (Odisha Couple Attacked) ಜೊತೆಗೆ, ಇತ್ತೀಚೆಗೆ ಪಾರ್ವತಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದು ಅತ್ತೆ-ಮಾವನ ಆಕ್ರೋಶವನ್ನು ಕಟ್ಟೆಯೊಡೆಯುವಂತೆ ಮಾಡಿತು. ಹೆಣ್ಣುಮಕ್ಕಳು ಹುಟ್ಟಿದ್ದಾರೆಂಬ ಕಾರಣಕ್ಕೆ ಸೊಸೆಯ ಮೇಲಷ್ಟೇ ಅಲ್ಲದೆ, ತಮ್ಮ ಹೆತ್ತ ಮಗ ಚಂದ್ರಶೇಖರ್ ಮೇಲೂ ಕಿರುಕುಳವನ್ನು ತೀವ್ರಗೊಳಿಸಿದರು. ಅಷ್ಟೇ ಅಲ್ಲದೆ, “ಆ ಎಳೆಗೂಸುಗಳನ್ನು ಸಾಯಿಸಿಬಿಡುತ್ತೇವೆ” ಎಂದು ನಿತ್ಯವೂ ಬೆದರಿಕೆ ಹಾಕುತ್ತಿದ್ದರು. Read this also : ಹುಳುಕು ಹಲ್ಲಿನ ಬದಲು ಆರೋಗ್ಯವಂತ ಹಲ್ಲು ಕಿತ್ತ ವೈದ್ಯೆ! ಅಜ್ಮೀರ್‌ನ ಜೆಎಲ್‌ಎನ್ ಆಸ್ಪತ್ರೆಯಲ್ಲಿ ಮಹಿಳೆಯ ಆಕ್ರೋಶ
ರಾಯಗಡದಲ್ಲಿ ಭೀಕರ ಹಲ್ಲೆ ಹಾಗೂ ರಕ್ಷಣೆ
ಈ ಕಿರುಕುಳದ ಮುಂದುವರಿದ ಭಾಗವಾಗಿ, ರಾಯಗಡ ಪಟ್ಟಣದಲ್ಲಿ ಅತ್ತೆ-ಮಾವ ಹಾಗೂ ಅವರ ಕುಟುಂಬದ ಇತರ ಸದಸ್ಯರು ಸೇರಿ ಏಕಾಏಕಿ ದಂಪತಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಈ ದಾರುಣ ವಿಷಯ ತಿಳಿದ ತಕ್ಷಣವೇ ಪಾರ್ವತಿಯ ಪೋಷಕರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಗೊಂಡಿದ್ದ ತಮ್ಮ ಮಗಳು, ಅಳಿಯ ಹಾಗೂ ಹಸಿಗೂಸು ಅವಳಿ ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿ ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಸದ್ಯ ಸಂತ್ರಸ್ತೆ ಪಾರ್ವತಿ ಹಾಗೂ ಆಕೆಯ (Odisha Couple Attacked) ಪತಿ ತಮ್ಮ ತವರು ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ
ತಮ್ಮ ಮೇಲೆ (Odisha Couple Attacked) ನಡೆದ ಈ ದೌರ್ಜನ್ಯದ ವಿರುದ್ಧ ದಂಪತಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸಂತ್ರಸ್ತರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಎಸ್‌ಐ ಚಂದ್ರಶೇಖರ್ ಬೆಹೆರಾ ತಿಳಿಸಿದ್ದಾರೆ. ಘಟನೆಯ ನಂತರ ಹಲ್ಲೆ ನಡೆಸಿದ ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
