Nikhil KumaraSwamy: ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಸಭೆಯಲ್ಲಿ ಮಾತನಾಡುವ ಸಮಯದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರವರಿಗೆ ದಿಢೀರನೇ ಮೂಗಿನಿಂದ ರಕ್ತಸ್ರಾವ ಉಂಟಾಗಿತ್ತು. ಈ ಸಂಬಂಧ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ (Nikhil KumaraSwamy) ಮಾತನಾಡಿದ್ದಾರೆ. ನನ್ನ ತಂದೆ ಆರೋಗ್ಯವಾಗಿದ್ದಾರೆ. ಅವರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನರಿಗೆ ಏನಾದರೂ ಮಾಡಬೇಕು ಎಂದು ಕೆಲಸ ಮಾಡುತ್ತಿದ್ದಾರೆ. ಕೆಲಸದ ಒತ್ತಡದಿಂದ ಮೂಗಿನಲ್ಲಿ ರಕ್ತಸ್ರಾವವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ-ಜೆಡಿಎಸ್ ಸಭೆ ನಡೆಯುತ್ತಿತ್ತು. ಈ ಸಭೆಯ ಬಳಿಕ ಹೆಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿದ್ದರು. ಈ ವೇಳೆ ಅವರ ಮೂಗಿನಿಂದ ರಕ್ತ ಬಂದಿದೆ. ಅವರಿಗೆ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೆಲಸದ ಒತ್ತಡಗಳ ಕಾರಣದಿಂದ ಈ ರೀತಿಯಾಗಿದೆ. ಜನರು ಆತಂಕಪಡುವುದು ಬೇಡ. ವೈದ್ಯರೂ ಸಹ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ರಾಜ್ಯದ ಜನರಿಗೆ ಏನಾದರೂ ಮಾಡಬೇಕು ಅಂತಾ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಜನರು ಹಾಗೂ ರೈತರ ಆರ್ಶಿವಾದ ಅವರ ಮೇಲಿದೆ ಎಂದಿದ್ದಾರೆ. ಇನ್ನೂ ಕುಮಾರಸ್ವಾಮಿ ರವರ ಆರೋಗ್ಯದ ಬಗ್ಗೆ ಅಪೊಲೋ ಆಸ್ಪತ್ರೆಯ ವೈದ್ಯ ಯತೀಶ್ ಮಾಹಿತಿ ನೀಡಿದ್ದಾರೆ. ಕುಮಾರಸ್ವಾಮಿಯವರಿಗೆ ಮೂರು ಬಾರಿ ಹೃದಯದ ಚಿಕಿತ್ಸೆಯಾಗಿದೆ. ಬಡ್ ಥಿನ್ನರ್ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಏನೂ ಆತಂಕ ಪಡುವ ಅಗತ್ಯವಿಲ್ಲ. ರೊಟೀನ್ ಚೆಕಪ್ ಮಾಡಿದ್ದೇವೆ. ತಪಾಸಣೆ ಮುಗಿಸಿ ಅವರು ಹೊರಡಿದರು ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಅಪೊಲೋ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಂದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಜನರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ನನಗೆ ಮೂರು ಬಾರಿ ಹೃದಯ ಸಂಬಂಧಿ ಚಿಕಿತ್ಸೆಯಾಗಿದೆ. ನಿರಂತರವಾಗಿ ಕೆಲಸ ಮಾಡುವುದರಿಂದ ನನಗೆ ಆಗಾಗ ಈ ರೀತಿಯಾಗುತ್ತದೆ. ವೈದ್ಯರು ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಜನರಿಗೆ ಏನಾದರೂ ಮಾಡಬೇಕು, ಕೇಂದ್ರ ಸರ್ಕಾರದಿಂದ ರಾಜ್ಯದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಕೆಲಸ ಮಾಡುತ್ತಿದ್ದೇನೆ. ಜನರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಆರ್ಶಿವಾದ ಇರುವವರೆಗೂ ನನಗೆ ಏನೂ ಆಗೊಲ್ಲ. ನನ್ನ ಆರೋಗ್ಯ ಸಂಪೂರ್ಣವಾಗಿ ಕೆಟ್ಟಿಲ್ಲ. ಇನ್ನೂ ಪಾದಯಾತ್ರೆಗೆ ಇನ್ನೂ ಒಂದು ವಾರ ಸಮಯವಿದೆ. ನಿಖಿಲ್ ಕುಮಾರಸ್ವಾಮಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಅದರಿಂದ ಯಾವುದೇ ರೀತಿಯ ಸಮಸ್ಯೆಯಾಗಲ್ಲ. ನನಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚನೆ ಕೊಟ್ಟರೇ, ನನ್ನ ಸ್ಥಾನವನ್ನು ನಿಖಿಲ್ ಕುಮಾರಸ್ವಾಮಿ ಯವರು ವಹಿಸಿಕೊಳ್ಳುತ್ತಾರೆ ಎಂದರು.