Matrimony ತಾಣಗಳ ಮೂಲಕ ಜೀವನ ಸಂಗಾತಿ ಹುಡುಕುವವರಿಗೆ ಎಚ್ಚರಿಕೆ! ಸೈಬರ್ ವಂಚಕರು ವಧು-ವರರ ಸೋಗಿನಲ್ಲಿ ಹೂಡಿಕೆ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿ ಮೋಸ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಕೆಪಿಟಿಸಿಎಲ್ ಇಂಜಿನಿಯರ್ ಒಬ್ಬರು ಮ್ಯಾಟ್ರಿಮೋನಿ ತಾಣದಲ್ಲಿ ಪರಿಚಯವಾದ ಮಹಿಳೆಯಿಂದ ಷೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ ಬರೊಬ್ಬರಿ ₹5 ಲಕ್ಷ ರೂಪಾಯಿ ವಂಚನೆಗೊಳಗಾಗಿದ್ದಾರೆ.

Matrimony – ಘಟನೆಯ ವಿವರ:
ದೂರುದಾರ ಕಿರಣ್ (ಹೆಸರು ಬದಲಾಯಿಸಲಾಗಿದೆ) 3 ವರ್ಷಗಳ ಹಿಂದೆ ಒಂದು ಮ್ಯಾಟ್ರಿಮೋನಿ ತಾಣದಲ್ಲಿ ನೋಂದಾಯಿಸಿಕೊಂಡಿದ್ದರು. ಕಳೆದ ಅಕ್ಟೋಬರ್ ನಲ್ಲಿ ಅವರಿಗೆ ಒಬ್ಬ ಅಪರಿಚಿತ ಮಹಿಳೆಯಿಂದ ಮದುವೆ ಪ್ರಸ್ತಾವನೆ ಬಂತು. ಡಿಸೆಂಬರ್ ನಲ್ಲಿ ಕಿರಣ್ ಆ ಪ್ರಸ್ತಾವನೆಗೆ ಒಪ್ಪಿಗೆ ತಿಳಿಸಿದ ನಂತರ, ಇಬ್ಬರೂ ಮೊಬೈಲ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡು ಸಂಪರ್ಕದಲ್ಲಿದ್ದರು. ಆ ಮಹಿಳೆ ತಾನು ಯುಕೆ ಬೆಲ್ಟ್ ಫಾಸ್ಟ್ ನಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ಫೆಬ್ರವರಿಯಲ್ಲಿ ಭಾರತಕ್ಕೆ ಬರಲಿದ್ದೇನೆ ಎಂದು ಹೇಳಿದ್ದಳಂತೆ.
Matrimony – ಹೂಡಿಕೆ ನೆಪದಲ್ಲಿ ವಂಚನೆ:
ನಂತರ ಇಬ್ಬರೂ ವಾಟ್ಸಾಪ್ ಮೂಲಕ ಸಂವಾದ ನಡೆಸುತ್ತಿದ್ದರು. ಆ ಮಹಿಳೆ ಷೇರು ಮಾರುಕಟ್ಟೆ ವ್ಯವಹಾರದ ಬಗ್ಗೆ ತನಗೆ ಪರಿಚಯವಿದೆ ಎಂದು ಹೇಳಿ, ಕಿರಣ್ ನನ್ನು ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸಿದಳು. ಆಕೆ ತಾನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಉತ್ತಮ ಲಾಭಗಳಿಸಿದ್ದೇನೆ ಎಂದು ಹೇಳಿದ್ದಳು. ಇದರ ಭರವಸೆಯಲ್ಲಿ ಕಿರಣ್ ವಿವಿಧ ಹಂತಗಳಲ್ಲಿ ₹5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರಂತೆ. ಆದರೆ, ಹಣವನ್ನು ಪಡೆದ ನಂತರ ಆ ಮಹಿಳೆ ಏಕಾಏಕಿ ಸಂಪರ್ಕ ಕಡಿದುಕೊಂಡಳು. ಕಿರಣ್ ಹಲವು ಬಾರಿ ಪ್ರಯತ್ನಿಸಿದರೂ ಅವಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

Matrimony – ಪೊಲೀಸರಿಗೆ ದೂರು:
ನಂತರ ತಾನು ವಂಚನೆಗೆ ಒಳಗಾದ ವಿಚಾರ ಅರಿತುಕೊಂಡು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಸೈಬರ್ ವಂಚಕರು ತಂತ್ರಜ್ಞಾನವನ್ನು ಬಳಸಿಕೊಂಡು ವಿವಿಧ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ. ಆದ್ದರಿಂದ ಆನ್ ಲೈನ್ ತಾಣಗಳಲ್ಲಿ ವ್ಯವಹಾರ ನಡೆಸುವವರು, ಅಪರಿಚಿತರಿಗೆ ಯಾವುದೇ ವಿವರಗಳನ್ನು ನೀಡದೇ ಇರುವುದು ಸೂಕ್ತ ಎಂದು ಹೇಳಬಹುದಾಗಿದೆ.