Mahashivaratri – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಗ್ರಾಮದ ಶ್ರೀ ಕೂರ್ಮಗಿರಿ ಶ್ರೀ ಲಕ್ಷ್ಮೀ ಆದಿ ನಾರಾಯಣಸ್ವಾಮಿ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಾಶಿವರಾತ್ರಿ ಕಾರ್ಯಕ್ರಮವನ್ನು ನೂತನವಾಗಿ ಪ್ರತಿಷ್ಠಾಪನೆಗೊಂಡಿದ್ದ ಶಿವಲಿಂಗಕ್ಕೆ ಶಸ್ತ್ರೋತ್ರವಾಗಿ ಹೋಮಹವನ ನೆರವೇರಿಸಲಾಯಿತು. ಲೋಕ ಕಲ್ಯಾಣಾರ್ಥ ಈ ಹೋಮವನ್ನು ಆಯೋಜಿಸಲಾಗಿತ್ತು.

ಈ ವೇಳೆ ಬ್ರಾಹ್ಮಣ ಸಂಘದ ಅಧ್ಯಕ್ಷ ಸೂರ್ಯಪ್ರಕಾಶ್ ಮಾತನಾಡಿ, ಮಹಾ ಶಿವನು ಇಷ್ಟಾರ್ಥ ಈಡೇರಿಸುವಂತಹ ದೈವ. ಶಿವನಲ್ಲಿ ಏನೂ ಬೇಡಿದರು ಕರುಣಿಸುತ್ತಾನೆ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಮಹಾ ಶಿವರಾತ್ರಿ ಹಬ್ಬ ಒಂದು. ಇದನ್ನು ಶಿವ ಮತ್ತು ಪಾರ್ವತಿಯ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಈ ದಿನವು ಹಿಂದೂಗಳಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಮಾಘ ಬಹುಳ ಚತುರ್ದಶಿಯ ರಾತ್ರಿಯೇ ಶಿವ ಪಾರ್ವತಿಯನ್ನು ವರಿಸಿದ್ದನಂತೆ. ಹೀಗಾಗಿ ಅಂದು ರಾತ್ರಿ ದೇವಾನು ದೇವತೆಗಳೆಲ್ಲರೂ ಜಾಗರಣೆ ಮಾಡಿ, ಗಿರಿಜಾ ಕಲ್ಯಾಣ ವೀಕ್ಷಿಸಿ, ಶಿವಪಾರ್ವತಿಯರಿಬ್ಬರನ್ನೂ ಪೂಜಿಸಿದರಂತೆ. ಹೀಗಾಗಿಯೇ ಜಾಗರಣೆ ಪದ್ಧತಿ ಆಚರಣೆಗೆ ಬಂದಿದೆ ಎನ್ನಲಾಗುತ್ತದೆ.
ಇತ್ತೀಚಿಗಷ್ಟೆ ಎಲ್ಲೋಡು ಕ್ಷೇತ್ರದಲ್ಲಿ ನೂತನವಾಗಿ ಪ್ರತಿಷ್ಟಾಪನಗೊಂಡ ಶಿವಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಮಹಾಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಯಿತು. ಮೂಲತಃ ವೈಷ್ಣವ ಕ್ಷೇತ್ರವಾದ ಇದು ಶ್ರೀ ಲಕ್ಷ್ಮಿ ಆದಿನಾರಾಯಣಸ್ವಾಮಿ ಕ್ಷೇತ್ರ. ಹಾಗೂ ಶಿವನಾರಾಯಣರ ಸಂಗಮ ಕ್ಷೇತ್ರ. ಇಲ್ಲಿ ಪ್ರತಿಷ್ಟಾಪನೆಗೊಂಡಿರುವ ಶಿವಲಿಂಗಕ್ಕೆ ವಿಶೇಷಪೂಜೆ ಸಲ್ಲಿಸಲಾಯಿತು.

ಶ್ರೀ ವೇದ ಬ್ರಹ್ಮ ಶ್ರೀ ಮಂಕಾಲ ಜ್ವಾಲಾ ಪ್ರಸಾದ್ ಶರ್ಮಾ, ಮತ್ತು ಬ್ರಾಹ್ಮಣ ಸಂಘದ ಅಧ್ಯಕ್ಷ ಸಿ.ಪಿ. ಸೂರ್ಯಪ್ರಕಾಶ್ ರವರ ನೇತೃತ್ವದಲ್ಲಿ ಸೇವಕರ್ತರಾದ ವೈ.ವಿ. ಯಶವಂತ್ ರೆಡ್ಡಿ ಹಾಗು ಅನಂತಪುರದ ನಿವಾಸಿಗಳಾದ ಮುಡಿಯಂ ಸುಬ್ರಹ್ಮಣ್ಯ ಶೆಟ್ಟಿ ರವರುಗಳ ಸಹಕಾರದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.