Bird Flu – ರಾಜ್ಯದಲ್ಲಿ ಆಗಾಗ ಹಕ್ಕಿ ಜ್ವರದ ಸದ್ದು ಕೇಳಿಬರುತ್ತಿರುತ್ತದೆ. ಇತ್ತೀಚಿಗಷ್ಟೆ ಕೊರೋನಾದಿಂದ ತತ್ತರಿಸಿದ್ದ ಜನತೆಗೆ ಇದೀಗ ಹಕ್ಕಿಜ್ವರದ ಭೀತಿ ಎದುರಾಗಿದೆ. ನೆರೆಹೊರೆಯ ರಾಜ್ಯಗಳಲ್ಲಿ ಹಕ್ಕಿ ಜ್ವರ ಭೀತಿ ಹೆಚ್ಚಾಗಿದ್ದು, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಈ ಹಕ್ಕಿ ಜ್ವರ ಹೆಚ್ಚಾಗಿತ್ತು. ಇದಿಗ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲೂ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಈ ಸಂಬಂಧ (Chikkaballapur) ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.

Bird Flu – ತುರ್ತು ಸಭೆ ನಡೆಸಿದ ಜಿಲ್ಲಾಡಳಿತ
ಚಿಕ್ಕಬಳ್ಳಾಪುರ ಜಿಲ್ಲೆಯ ವರದಹಳ್ಳಿ ಎಂಬ ಗ್ರಾಮದಲ್ಲಿ ಸುಮಾರು 50 ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿತ್ತು. ಬಳಿಕ ಸತ್ತ ಕೋಳಿಗಳ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿತ್ತು. ಈ ಸಂಬಂಧ ವರದಿ ಬಂದಿದ್ದು, ಹಕ್ಕಿ ಜ್ವರದ ಕಾರಣದಿಂದಲೇ ಕೋಳಿಗಳು ಸಾವನ್ನಪ್ಪಿರುವುದಾಗಿ ವರದಿ ಬಂದಿದೆ ಎನ್ನಲಾಗಿದೆ. ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತುರ್ತು ಸಭೆ ಕರೆದಿದ್ದಾರೆ. ಇನ್ನೂ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ವಿಷಯ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಜೊತೆಗೆ ಗ್ರಾಮದೆಲ್ಲೆಡೆ ಬ್ಲೀಚಿಂಗ್ ಪೌಂಡರ್ ಸಿಂಪಡಿಸಿ ಅಧಿಕಾರಿಗಳು ಆರೋಗ್ಯ ವಿಚಾರಿಸಿದ್ದಾರೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಭೂಪಾಲ್‍ನ ಪ್ರಯೋಗಾಲಯ ನೀಡಿದ ವರದಿಯಿಂದ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ ಪತ್ತೆಯಾಗಿರುವುದು ದೃಢವಾಗಿದೆ. ಸಂತೆಯಿಂದ ಕೋಳಿ ತಂದು ಸಾಕಾಣಿಕೆ ಮಾಡಿರುವುದರಿಂದ ವೈರಸ್ ತಗುಲಿರಬಹುದು. ರೋಗನಿಯಂತ್ರಣಕ್ಕಾಗಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದೇನೆ. ಗ್ರಾಮದ ಸುತ್ತಮುತ್ತಲಿನ ಎಲ್ಲಾ ಕೋಳಿಗಳನ್ನು ನಾಶ ಮಾಡುವ ಬಗ್ಗೆ ಕ್ರಮ ವಹಿಸಲಾಗಿದೆ. ಗ್ರಾಮದ ಜನರ ಬಳಿ ಕೋಳಿಗಳನ್ನು ಕೊಡಲು ಮನವಿ ಮಾಡುತ್ತೇನೆ. ವೈರಸ್ ಹರಡದಂತೆ ತಡೆಯಲು ಕೋಳಿಗಳ ಹತ್ಯೆ ಮಾಡಲಾಗುವುದು. ಜನರು ಧೈರ್ಯವಾಗಿರಬೇಕೆಂದು ಸಲಹೆ ನೀಡಿದ್ದಾರೆ.

Bird Flu- ಮನುಷ್ಯರಿಗೆ ಹಕ್ಕಿ ಜ್ವರ ಬಂದರೆ ಸಾಯುತ್ತಾರೆಯೇ?
ಹಕ್ಕಿ ಜ್ವರ (ಏವಿಯನ್ ಇನ್ಫ್ಲುಯೆನ್ಸ್) ಒಂದು ವೈರಲ್ ಸೋಂಕು. ಇದು ಮುಖ್ಯವಾಗಿ ಪಕ್ಷಿಗಳಲ್ಲಿ ಕಂಡುಬರುವ ರೋಗ. ಕೋಳಿಗಳು, ಟರ್ಕಿಗಳು, ಬಾತುಕೋಳಿಗಳು ಮುಂತಾದ ಪಕ್ಷಿಗಳು ಇದರಿಂದ ಬಹಳಷ್ಟು ಬಾಧಿತವಾಗುತ್ತವೆ. ಈ ರೋಗಕ್ಕೆ ಕಾರಣವಾದ ಇನ್ಫ್ಲುಯೆನ್ಸ್ ಎ ವೈರಸ್ ಗಳಲ್ಲಿ H5N1, H7N9, ಮತ್ತು H5N8 ಮುಂತಾದ ತಳಿಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ, ಎಲ್ಲಾ ವೈರಸ್ ತಳಿಗಳು ಮನುಷ್ಯರಿಗೆ ಸೋಂಕು ಹರಡುವುದಿಲ್ಲ. ಕೆಲವು ತಳಿಗಳು ಮಾತ್ರ ಮನುಷ್ಯರಿಗೆ ಅಪಾಯಕಾರಿಯಾಗಬಹುದು.
Bird Flu- ಹಕ್ಕಿ ಜ್ವರ ಕೋಳಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಹಕ್ಕಿ ಜ್ವರ ಯಾವಾಗಲೂ ಕೋಳಿಗಳಿಗೆ ಮಾರಕವಲ್ಲ. ಆದರೆ, ಇದರ ತೀವ್ರತೆಯನ್ನು ಅವಲಂಬಿಸಿ ಕೋಳಿಗಳು ಬಹಳ ಬೇಗನೆ ಸಾಯುವ ಸಾಧ್ಯತೆ ಇದೆ. ಕೋಳಿಗಳು ರೋಗದಿಂದ ಬಳಲುತ್ತವೆ, ರೆಕ್ಕೆಗಳು ಸರಿಯಾಗಿ ಬೆಳೆಯುವುದಿಲ್ಲ, ಮೊಟ್ಟೆ ಇಡುವ ಪ್ರಮಾಣ ಕಡಿಮೆಯಾಗುತ್ತದೆ, ಮತ್ತು ಉಸಿರಾಟದ ತೊಂದರೆಗಳು ಉಂಟಾಗುತ್ತವೆ. ಕೆಲವು ಕೋಳಿಗಳು ರೋಗದಿಂದ ಚೇತರಿಸಿಕೊಳ್ಳುತ್ತವೆ, ಆದರೆ ಅವುಗಳಿಂದ ವೈರಸ್ ಹರಡುವ ಅಪಾಯ ಉಳಿದಿರುತ್ತದೆ. ತೀವ್ರ ಸಂದರ್ಭಗಳಲ್ಲಿ, ಕೋಳಿಗಳು ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಸಾಯುತ್ತವೆ. ರೋಗ ತೀವ್ರವಾಗಿದ್ದರೆ, ಸೋಂಕಿತ ಪ್ರದೇಶದಲ್ಲಿನ ಎಲ್ಲಾ ಕೋಳಿಗಳನ್ನು ನಾಶಪಡಿಸುವುದು ಸಾಮಾನ್ಯ ಪದ್ಧತಿ.
Bird Flu-ಹಕ್ಕಿ ಜ್ವರದ ಲಕ್ಷಣಗಳು:
ಹಕ್ಕಿ ಜ್ವರದಿಂದ ಬಾಧಿತವಾದ ಕೋಳಿಗಳಲ್ಲಿ ಕೆಲವು ಸಾಮಾನ್ಯ ಲಕ್ಷಣಗಳು ಕಂಡುಬರುತ್ತವೆ. ಅವುಗಳ ತಲೆ ಊದಿಕೊಳ್ಳುತ್ತದೆ, ಕಾಲುಗಳು ಮತ್ತು ದೇಹ ನೇರಳೆ ಬಣ್ಣಕ್ಕೆ ತಿರುಗುತ್ತದೆ, ಉಸಿರಾಟದ ತೊಂದರೆ, ಅತಿಸಾರ, ಕೆಮ್ಮು, ಮತ್ತು ಸೀನುವುದು ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಕೋಳಿಗಳು ಯಾವುದೇ ಲಕ್ಷಣಗಳನ್ನು ತೋರಿಸದೆ ಇದ್ದಕ್ಕಿದ್ದಂತೆ ಸಾಯುತ್ತವೆ.
Bird Flu- ಹಕ್ಕಿ ಜ್ವರ ಮನುಷ್ಯರಿಗೆ ಹರಡುತ್ತದೆಯೇ?
ಹೌದು, ಹಕ್ಕಿ ಜ್ವರ ಅಪರೂಪಕ್ಕೆ ಮನುಷ್ಯರಿಗೆ ಹರಡಬಹುದು. ಸೋಂಕಿತ ಪಕ್ಷಿಗಳನ್ನು ಮುಟ್ಟಿದರೆ, ಅವುಗಳ ಮಾಂಸ ಅಥವಾ ಮೊಟ್ಟೆಗಳನ್ನು ಸರಿಯಾಗಿ ಬೇಯಿಸದೆ ತಿಂದರೆ, ಅಥವಾ ಸೋಂಕಿತ ಪ್ರದೇಶದಲ್ಲಿ ಗಾಳಿಯನ್ನು ಉಸಿರಾಡಿದರೆ ಈ ರೋಗ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ. ಕೋಳಿ ತ್ಯಾಜ್ಯದಿಂದ ವೈರಸ್ ಗಾಳಿಯಲ್ಲಿ ಹರಡಬಹುದು. ಮನುಷ್ಯರಿಗೆ ಸೋಂಕು ತಗಲುವುದನ್ನು ತಡೆಯಲು, ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಕನಿಷ್ಠ 75 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸಂಪೂರ್ಣವಾಗಿ ಬೇಯಿಸಬೇಕು.
Bird Flu- ಮನುಷ್ಯರಿಗೆ ಹಕ್ಕಿ ಜ್ವರ ಬಂದರೆ ಏನಾಗುತ್ತದೆ?
ಹಕ್ಕಿ ಜ್ವರ ಮನುಷ್ಯರಿಗೆ ಬಂದರೆ, ಅದು ತೀವ್ರವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಉಸಿರಾಟದ ತೊಂದರೆ, ಜ್ವರ, ಕೆಮ್ಮು, ಮತ್ತು ಇತರ ಫ್ಲೂ ಲಕ್ಷಣಗಳನ್ನು ಉಂಟುಮಾಡುತ್ತದೆ. ತೀವ್ರ ಸಂದರ್ಭಗಳಲ್ಲಿ, ಇದು ಮರಣಕ್ಕೂ ಕಾರಣವಾಗಬಹುದು. ಆದರೆ, ಸರಿಯಾದ ಚಿಕಿತ್ಸೆ ಮತ್ತು ಕಾಳಜಿಯಿಂದ ಈ ರೋಗವನ್ನು ನಿಯಂತ್ರಿಸಬಹುದು. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು, ಸೋಂಕಿತ ಪ್ರದೇಶಗಳಿಂದ ದೂರವಿರುವುದು, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಮತ್ತು ಪಕ್ಷಿಗಳ ಸಂಪರ್ಕವನ್ನು ತಪ್ಪಿಸುವುದು ಅತ್ಯಗತ್ಯ. ಆದ್ದರಿಂದ ತಜ್ಞರ ಸಲಹೆಯಂತೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ.