Local News ಇತ್ತಿಚಿಗಷ್ಟೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಮುದ್ದು ಗೌರಮ್ಮ ರವರನ್ನು ಗುಡಿಬಂಡೆ ತಾಲೂಕು ಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಎನ್.ವಿ.ಗಂಗಾಧರ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಮುಂದೆ ಬರುವುದೇ ಕಷ್ಟ ಅಂತಹುದರಲ್ಲಿ ವಾಲ್ಮೀಕಿ ಸಮುದಾಯದ ಓರ್ವ ಮಹಿಳೆ ಧೈರ್ಯದಿಂದ ಚುನಾವಣೆಗೆ ಸ್ಪರ್ಧಿಸಿ ಉಪಾಧ್ಯಕ್ಷರಾಗಿದ್ದಾರೆ. ಅವರಿಗೆ ವಾಲ್ಮೀಕಿ ಸಮುದಾಯದ ವತಿಯಿಂದ ಅಭಿನಂದನೆಗಳನ್ನು ತಿಳಿಸುತ್ತೇವೆ. ಪಂಚಾಯತಿಯಲ್ಲಿ ಏನೆ ಸಮಸ್ಯೆಗಳು ಇದ್ದರೂ ತಾವು ತಾಲೂಕು ಸಂಘಕ್ಕೆ ಮಾಹಿತಿ ತಿಳಿಸಿ ನಾವು ಬಗೆಹರಿಸುವ ಕೆಲಸ ಮಾಡುತ್ತೇವೆ. ತಮ್ಮ ಅಭಿವೃದ್ದಿ ಕೆಲಸಗಳಿಗೆ ನಾವು ಸಾಥ್ ನೀಡುತ್ತೇವೆ ಎಂದರು.
ಬಳಿಕ ಹಂಪಸಂದ್ರ ವಾಲ್ಮೀಕಿ ಮುಖಂಡ ಮೂರ್ತಿ ಮಾತನಾಡಿ, ದಲಿತರು ರಾಜಕೀಯವಾಗಿ ಬೆಳೆಯುವುದು ತುಂಬಾನೆ ಕಷ್ಟ ಎಂದು ಹೇಳಬಹುದು ಆದರೆ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಂತು ವಾಲ್ಮೀಕಿ ಸಮುದಾಯದ ಮುದ್ದು ಗೌರಮ್ಮ ರವರು ಇದೀಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಅನೇಕರಿಗೆ ಸ್ಪೂರ್ತಿಯಾಗಲಿದೆ. ಅವರು ಸಮುದಾಯ ಸೇರಿದಂತೆ ದಲಿತರು, ಬಡವರ ಪರ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಬೇಕೆಂದು. ಜೊತೆಗೆ ಹಂಪಸಂದ್ರ ಗ್ರಾ.ಪಂ ವ್ಯಾಪ್ತಿಯಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಹಾಗೂ ಸಮುದಾಯದ ಅಭಿವೃದ್ದಿಗೆ ಶ್ರಮಿಸಬೇಕೆಂದು ಶುಭ ಕೋರಿದರು.
ಇದೇ ಸಮಯದಲ್ಲಿ ದಾವಣಗೆರೆಯ ರಾಚನಹಳ್ಳಿ ಗುರುಪೀಠದಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆಗೆ ಎಲ್ಲರೂ ಆಗಮಿಸಬೇಕಾಗಿ ವಾಲ್ಮೀಕಿ ಮುಖಂಡರು ಮನವಿ ಮಾಡಿದರು. ಈ ವೇಳೆ ವಾಲ್ಮೀಕಿ ಸಂಘದ ಕಾರ್ಯದರ್ಶಿ ಹರಿಕೃಷ್ಣ, ಮುಖಂಡರಾದ ಕೋರೇನಹಳ್ಳಿ ಶ್ರೀನಿವಾಸ್, ಹಂಪಸಂದ್ರ ಆದಿನಾರಾಯಣಪ್ಪ, ನಾರಾಯಣಸ್ವಾಮಿ, ಮೂರ್ತಿ, ನರಸಿಂಹಮೂರ್ತಿ, ರಮೇಶ್, ರಾಮಾಂಜಿ, ಬಾಲಾಜಿ ಸೇರಿದಂತೆ ಹಲವರು ಇದ್ದರು.