Love – ಈ ಪ್ರೀತಿ ಯಾರಿಗೆ ಯಾವಾಗ ಹೇಗೆ ಹುಟ್ಟುತ್ತೆ ಎಂಬುದು ಹೇಳೋಕೆ ಆಗೊಲ್ಲ ಅನ್ನೋ ಮಾತಿದೆ. ಆದರೆ ಅನೇಕ ಲವ್ ಕೇಸ್ ಗಳು ದುರಂತವನ್ನೆ ಕಂಡಿದೆ. ಕೆಲವೊಂದು ಪ್ರಕರಣಗಳಲ್ಲಿ ಮೋಸ, ವಂಚನೆಯಂತಹವು ಹೆಚ್ಚಾಗಿಯೇ ನಡೆದಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ದುಬೈನ ಕತಾರ್ ನಲ್ಲಿ ಹುಟ್ಟಿದ ಪ್ರೀತಿ, ವಿಜಯಪುರದಲ್ಲಿ ಅಂತ್ಯವಾಗಿದೆ. ಆರೋಪಿಯನ್ನು ಆರೀಫ್ ಎಂದು ಗುರ್ತಿಸಲಾಗಿದೆ. ಆರೋಪಿ ಆಂಧ್ರದ ಚಿತ್ತಾಪುರ ಮೂಲದ ಯುವತಿಯನ್ನು ಪ್ರೀತಿಸಿ ಬಳಿಕ ಆಕೆಯ ಮೇಲೆ ಹಲ್ಲೆ ನಡೆಸಿ ಎಲ್ಲವನ್ನೂ ದೋಚಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಮೋಸಹೋದ ಯುವತಿ ಕಳೆದ ನಾಲ್ಕು ವರ್ಷಗಳ ಹಿಂದೆ ದುಬೈನ ಕತಾರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಆ ಸಮಯದಲ್ಲಿ ಯುವತಿಗೆ ಆರೀಫ್ ಎಂಬ ಯುವಕನ ಪರಿಚಯವಾಗಿತ್ತು. ಬಳಿಕ ಅವರಿಬ್ಬರ ಪರಿಚಯ ಪ್ರೀತಿಯಾಗಿ ಬದಲಾಗಿದೆ. ಸುಮಾರು ಮೂರು ವರ್ಷಗಳ ಕಾಲ ಇಬ್ಬರೂ ದುಬೈನಲ್ಲಿ ಒಟ್ಟಿಗೆ ಇದ್ದರು. ನಂತರ ಕರ್ನಾಟಕದ ಸ್ವಗ್ರಾಮಕ್ಕೆ ತೆರಳಿ ಸೆಟಲ್ ಆಗೋಣ ಎಂದು ಹೇಳಿದ ಆರೋಪಿ ವಿಜಯಪುರಕ್ಕೆ ಯುವತಿಯನ್ನು ಕರೆದುಕೊಂಡು ಬಂದಿದ್ದ. ಆರೀಫ್ ಕುಟುಂಬದವರು ಇಬ್ಬರಿಗೂ ಮದುವೆ ಸಹ ಮಾಡಿಸಿದ್ದರು. ಇನ್ನೂ ಮದುವೆಯಾದ 20 ದಿನದಲ್ಲೇ ಆರೀಫ್ ಮನೆಯವರು ಯುವತಿಗೆ ತಲಾಖ್ ನೀಡುವಂತೆ ಒತ್ತಾಯಿಸುತ್ತಿದ್ದರು. ಇದರಿಂದ ಬೇಸತ್ತ ಯುವತಿ ಪೊಲೀಸರ ಮೊರೆ ಹೋಗಿದ್ದಳು. ಬಳಿಕ ಆರೀಫ್ ಯುವತಿಯ ಜೊತೆ ಸರಿಯಾಗಿ ಸಂಸಾರ ಮಾಡುತ್ತೇನೆ ಎಂದು ತಿಳಿಸಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದನಂತೆ. ಕೆಲವು ದಿನಗಳ ಕಾಲ ಸುಮ್ಮನಿದ್ದ ಆರೀಫ್ ಮತ್ತೆ ಯುವತಿಯ ಮೇಲೆ ಹಲ್ಲೆ ನಡೆಸಲು ಶುರುಮಾಡಿದ್ದಾನೆ.
ನಂತರ ವಿಜಯಪುರದ ಬುರನಾಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಅಲ್ಲಿಯೂ ಸಹ ಇಬ್ಬರೂ ಸರಿಯಾಗಿ ಸಂಸಾರ ಸಾಗಿಸಿಲ್ಲ. ಇಬ್ಬರ ನಡುವೆ ಗಲಾಟೆ ನಡೆದಿದೆ. ನಂತರ ಆರೀಫ್ ತನ್ನ ಸಂಬಂಧಿಕರೊಂದಿಗೆ ಬಂದು ಚಾಕು ತೋರಿಸಿ ಜೀವ ಬೆದರಿಕೆ ಸಹ ಹಾಕಿದ್ದನಂತೆ. ಇದೇ ಸಮಯದಲ್ಲಿ ಯುವತಿಯ ಬಳಿಯಿದ್ದ ಹಣ, ಮೊಬೈಲ್ ಸೇರಿದಂತೆ ಎಲ್ಲವನ್ನೂ ತೆಗೆದುಕೊಂಡು ಪರಾರಿಯಾಗಿದ್ದಾನೆ. ಇದೀಗ ಯುವತಿಯ ಬದುಕು ಬೀದಿಪಾಲಾಗಿದೆ. ಜೊತೆಗೆ ಆರೀಫ್ ಸಂಬಂಧಿಕರು ಸಹ ಆಕೆಗೆ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರಂತೆ. ನನಗೆ ನ್ಯಾಯ ಸಿಗುತ್ತಿಲ್ಲ. ನ್ಯಾಯ ಸಿಗದೇ ಇದ್ದರೇ ಆರೀಫ್ ಕುಟುಂಬಸ್ಥರು ಹಾಗೂ ನಮ್ಮ ಮದುವೆ ಮಾಡಿಸಿದವರ ಹೆಸರುಗಳನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿ, ತನ್ನ ಪತಿಯನ್ನು ಹುಡುಕಿಕೊಡುವಂತೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾಳೆ ಎಂದು ತಿಳಿದುಬಂದಿದೆ.