Local News – ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳು ಕಠಿಣ ಪರಿಶ್ರಮದೊಂದಿಗೆ ಓದಿದಾಗ ಯಶಸ್ಸು ಗಳಿಸಲು ಸಾಧ್ಯವಿದೆ. ಕಠಿಣ ಪರಿಶ್ರಮದ ಜೊತೆಗೆ ಬಾಲ್ಯದಿಂದಲೇ ಆತ್ಮಸ್ಥೈರ್ಯ ಬೆಳೆಸಿಕೊಂಡಾಗ ಸಾಧನೆ ಮತಷ್ಟು ಸುಲಭವಾಗಲಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಡಾ.ಶಿವಕುಮಾರ್ ಮಕ್ಕಳಿಗೆ ಕಿವಿಮಾತು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿರುವ (Local News) ಪಿಎಂ ಶ್ರೀ ಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ಮಕ್ಕಳು ತುಂಬಾನೆ ಕ್ರಿಯಾಶೀಲರಾಗಿರಬೇಕು. ತಂತ್ರಜ್ಞಾನ ತುಂಬಾನೆ ಮುಂದುವರೆದಿದೆ. ಅದರಂತೆ ಮಕ್ಕಳಾದ ತಾವುಗಳೂ ಸಹ ಶ್ರಮಪಟ್ಟು ಓದಬೇಕು. ವಿಶೇಷ ಚೇತನ ಮಕ್ಕಳೂ ಸಹ ಇಂದಿನ ಕಾಲದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುತ್ತಿರುತ್ತಾರೆ. ಅದಕ್ಕೆ ಅವರಲ್ಲಿನ ಆತ್ಮಸ್ಥೈರ್ಯವೇ ಕಾರಣ ಎನ್ನಬಹುದು. ಆದ್ದರಿಂದ ಮಕ್ಕಳು ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ಓದಿದಾಗ ಸಾಧನೆ ಮಾಡುವುದು ಸಹ ತುಂಬಾನೆ ಸುಲಭವಾಗಿದೆ. ಇನ್ನೂ ಮಕ್ಕಳೂ ಸಹ ಮೊಬೈಲ್, ಇಂಟರ್ ನೆಟ್, ಟಿವಿಗಳ ದಾಸರಾಗಬಾರದು. ತಂತ್ರಜ್ಞಾನವೂ ಶಿಕ್ಷಣಕ್ಕೆ ತುಂಬಾನೆ ಅಗತ್ಯವಾಗಿದೆ. ಮೊಬೈಲ್, ಇಂಟರ್ ನೆಟ್ ಗಳ ಮೂಲಕ ತಮ್ಮ ಶಿಕ್ಷಣಕ್ಕೆ ಬೇಕಾದ ಮಾಹಿತಿಯನ್ನು ಮಾತ್ರ ಪಡೆದುಕೊಳ್ಳಬೇಕು ಎಂದರು.
ನಂತರ ಪಿಎಂಶ್ರೀ ಶಾಲೆಯ ಮುಖ್ಯ ಶಿಕ್ಷಕ ನಾಗಲಿಂಗಪ್ಪ ಮಾತನಾಡಿ, ಪಿಎಂಶ್ರೀ ಶಾಲೆಯಿಂದ ಸಾಕಷ್ಟು ಸೌಲಭ್ಯಗಳು ಮಕ್ಕಳಿಗೆ ಸಿಗಲಿದೆ. ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಓದುವ ಮೂಲಕ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದುಕೊಡಬೇಕು. ರಾಷ್ಟ್ರೀಯ ಪ್ರಶಸ್ತಿ ಪಡೆದಂತಹ ಶಿವಕುಮಾರ್ ರವರು ನಮ್ಮ ಶಾಲೆಗೆ ಬಂದು ಮಕ್ಕಳಿಗೆ ಮೊಟೀವೇಷನ್ ಮಾಡಿರುವುದು ಸಂತಸದ ವಿಚಾರವಾಗಿದೆ. ಅವರ ಉಪನ್ಯಾಸ ಕೇಳಿದಂತಹ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಬೇಕೆಂದರು.
ಈ ವೇಳೆ ಸೋಮೇನಹಳ್ಳಿ ಪಿಎಂಶ್ರೀ ಶಾಲೆಯ ಶಿಕ್ಷಕರಾದ ಶ್ರೀನಿವಾಸ್, ರಾಜಶೇಖರ್, ರಾಮಕೃಷ್ಣ, ಮನೋಹರ್ ಸೇರಿದಂತೆ ಹಲವರು ಇದ್ದರು.