Local News – ಶತ್ರುಗಳು ಚಿತ್ರದುರ್ಗ ಕೋಟೆಗೆ ನುಗ್ಗಿದಾಗ ಅದನ್ನು ನೋಡಿ ಭಯಪಡದೇ ಒನಕೆಯಿಂದ ಹೊಡೆದು ಹೊಡೆದು ಸಾಯಿಸಿ ನಾಡಿನ ಪ್ರೇಮ ಮೆರೆದ ವೀರ ವನಿತೆ ಒನಕೆ ಓಬ್ಬವ್ವನ ಧೈರ್ಯ ಸಾಹಸಗಳು ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಬೇಕು ಎಂದು ಚಲವಾದಿ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ.ಚಿಕ್ಕನರಸಿಂಹಪ್ಪ ತಿಳಿಸಿದರು.
ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ (Local News) ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಒನಕೆ ಓಬ್ಬವ್ವ ಜಯಂತಿ ಹಾಗೂ ಮೌಲಾನಾ ಅಬುಲ್ ಕಲಾಂ ಆಜಾದ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಕೋಟೆಯನ್ನು ಕಾಯುತ್ತಿದ್ದ ತನ್ನ ಪತಿ ಊಟಕ್ಕೆಂದು ಮನೆಗೆ ಹೋಗಿದ್ದಾಗ, ನಿಜಾಮರು ಸುರಂಗದ ಮೂಲಕ ಕೋಟೆಯ ಒಳಗೆ ನುಗ್ಗುತ್ತಿರುತ್ತಾರೆ. ಅದನ್ನು ಕಂಡ ಓಬವ್ವ ತನ್ನ ಪತಿಗೆ ಹೇಳುವಷ್ಟರಲ್ಲಿ ಶತ್ರುಗಳು ನುಗ್ಗಿಬಿಡುತ್ತಾರೆ ಎಂದು ಮನೆಯಲ್ಲಿದ್ದ ಒನಕೆಯನ್ನೇ ಆಯುಧವನ್ನಾಗಿ ಮಾಡಿಕೊಂಡು, ಸುರಂಗ ಮಾರ್ಗದಿಂದ ಬರುತ್ತಿದ್ದ ಶತ್ರು ಸೈನಿಕರನ್ನು ಒಡೆದು ಸಾಯಿಸುತ್ತಾಳೆ. ಒಬ್ಬವ್ವನ ಈ ಧೈರ್ಯ ಸಾಹಸವನ್ನು ಇಂದಿನ ಹೆಣ್ಣು ಮಕ್ಕಳು ಅಳವಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ನ್ಯೂ ವಿಷನ್ ಶಾಲೆಯ ಮುಖ್ಯಸ್ಥೆ ಡಿ.ಎಲ್.ಪರಿಮಳ, ಎಷ್ಟೇ ನಾಗರೀಕತೆ ಬೆಳೆದರೂ ಇಂದಿಗೂ ಕೂಡ ರಾಜ್ಯದ ಅನೇಕ ಭಾಗಗಳಲ್ಲಿ ಮೂಡನಂಬಿಕೆಗಳು ಜೀವಂತವಾಗಿದೆ. ಈ ಮೂಡನಂಬಿಕೆಗಳನ್ನು ತೊಡೆದು ಹಾಕಲು ಎಲ್ಲರೂ ಶಿಕ್ಷಣ ಪಡೆಯಬೇಕು. ಮೌಲಾನಾ ಆಜಾದ್ ರವರು ಶಿಕ್ಷಣ ಮಂತ್ರಿಗಳಾಗಿ ದೇಶದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದಂತಹವರು. ಎಲ್ಲರಿಗೂ ಶಿಕ್ಷಣ ದೊರೆಯುವಂತೆ ಮಾಡಿದ ಮೊದಲ ವ್ಯಕ್ತಿ ಎಂದರೇ ತಪ್ಪಾಗಲಾರದು. ಶಿಕ್ಷಣ ಕ್ಷೇತ್ರಕ್ಕೆ ಡಾ.ಮೌಲಾನಾ ಅಬುಲ್ ಕಲಾಂ ಅಜಾದ್ ರವರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರ ಶ್ರಮದಿಂದ ಇಂದು ಅನೇಕರಿಗೆ ಶಿಕ್ಷಣ ದೊರೆತಿದೆ ಎಂದರೇ ತಪ್ಪಾಗಲಾರದು. ಅವರ ಜಯಂತಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಣೆ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾ.ಪಂ ಇಒ ಹೇಮಾವತಿ, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ, ಉರ್ದು ಸಾಹಿತ್ಯ ಪರಿಷತ್ ನ ಮೊಹಮದ್ ನಾಸೀರ್, ಕೃಷಿ ಇಲಾಖೆಯ ಕೇಶವರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರುಗಳು ಹಾಜರಿದ್ದರು.