Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 19 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕ ಸಿದ್ದಯ್ಯರವರನ್ನು ಶಾಲಾ ಸಿಬ್ಬಂದಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ವೇಳೆ ಮಾತನಾಡಿದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯೋಜಕಿ ಗಂಗರತ್ನಮ್ಮ ನಿವೃತ್ತರಾದ ಶಿಕ್ಷಕ ಸಿದ್ದಯ್ಯ ರವರು ತುಂಬಾ ಸರಳ ಜೀವಿ. ತಮ್ಮ ಸುಮಾರು ವರ್ಷಗಳ ಕಾಲ ಶಿಕ್ಷಕರಾಗಿ ಅನೇಕ ವಿದ್ಯಾರ್ಥಿಗಳ ಜೀವನವನ್ನು ರೂಪಿಸಿದ್ದಾರೆ. ಅವರು ಇಂದು ನಿವೃತ್ತಿಯಾಗುತ್ತಿರುವುದು ಶಿಕ್ಷಣ ಇಲಾಖೆಗೆ ತುಂಬಲಾರದ ನಷ್ಟ ಎಂದೇ ಹೇಳಬಹುದು. ಅವರು ಮುಂದಿನ ಜೀವನ ಆರೋಗ್ಯಕರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ನಂತರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ಮಾತನಾಡಿ, ಪ್ರತಿಯೊಬ್ಬ ಸರ್ಕಾರಿ ನೌಕರರನಿಗೆ ನಿವೃತ್ತಿ ಎಂಬುದು ಕಡ್ಡಾಯವಾಗಿರುತ್ತದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿಯಾಗಿರುತ್ತದೆ. ಆ ಪವಿತ್ರತೆಯನ್ನು ಸಿದ್ದಯ್ಯನವರು ಪಾಲಿಸಿದ್ದಾರೆ. ಶಿಕ್ಷಕರ ಬೀಳ್ಕೊಡುಗೆ ಮಾಡುವುದು ಒಂದು ರೀತಿಯ ನೋವಿನ ಕಾರ್ಯಕ್ರಮ ಎಂದೇ ಹೇಳಬಹುದು. ಸಿದ್ದಯ್ಯನವರ ಮುಂದಿನ ಜೀವನ ಸುಖಮಯವಾಗಿರಲಿ ಎಂದರು.
ಇನ್ನೂ ಕಾರ್ಯಕ್ರಮದಲ್ಲಿ ನಿವೃತ್ತಿಯಾದ ಶಿಕ್ಷಕ ಸಿದ್ದಯ್ಯ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು. ಈ ವೇಳೆ ಪಪಂ ಅಧ್ಯಕ್ಷ ವಿಕಾಸ್, ಶಿಕ್ಷಣ ಇಲಾಖೆಯ ರಾಘವೇಂದ್ರ, ಬಿ.ಆರ್.ಪಿ ಗಳಾದ ಚಂದ್ರಶೇಖರ್, ಭಾರತಿ, ಶಾಲೆಯ ಮುಖ್ಯ ಶಿಕ್ಷಕ ಎಂ.ಶಂಕರ್, ಪಪಂ ಸದಸ್ಯರಾದ ರಾಜೇಶ್, ಜಿ.ರಾಜೇಶ್, ಅಂಬರೀಶ್, ಆದಿನಾರಾಯಣಪ್ಪ, ಶಿಕ್ಷಕರ ಸಂಘದ ಶ್ರೀರಾಮಪ್ಪ, ಸುಮಿತ್ರ ಸೇರಿದಂತೆ ಶಾಲೆಯ ಸಿಬ್ಬಂದಿ, ವಿವಿಧ ಶಾಲೆಗಳ ಶಿಕ್ಷಕರುಗಳು ಹಾಜರಿದ್ದರು.