Local News – ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಎಸ್.ಎಸ್.ಎಲ್.ಸಿ ಫಲಿತಾಂಶಕ್ಕೂ ಮುನ್ನಾ ಗುಡಿಬಂಡೆ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳಿಗೆ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ತೆರಳಿ ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್ ಗಳು, ಉಪನ್ಯಾಸಕರು ಹಾಗೂ ಮೂಲಭೂತ ಸೌಲಭ್ಯಗಳ ಪ್ರಚಾರ ಮಾಡುವ ಮೂಲಕ ತಮ್ಮ ಕಾಲೇಜಿಗೆ ಭೇಟಿ ನೀಡುವಂತೆ ಮನವೊಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

Local News – ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಒಳ್ಳೆಯ ಶಿಕ್ಷಣ ಸಿಗುತ್ತೆ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ದಾಖಲಾತಿ ಆಂದೋಲನದ ನಿಮಿತ್ತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ. ರವೀಂದ್ರ ಮಾತನಾಡಿ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶ ಸೇವೆಯಲ್ಲಿ ತೊಡಗಿದ್ದಾರೆ ಅದೇ ರೀತಿ ತಮ್ಮ ಪೋಷಕರನ್ನು ಒಪ್ಪಿಸಿ ಖಾಸಗಿ ಶಾಲೆಗಳತ್ತ ಯಾವುದೇ ವ್ಯಾಮೋಹ ಇಟ್ಟುಕೊಳ್ಳದೇ ನಮ್ಮ ಸರ್ಕಾರಿ ಕಾಲೇಜಿಗೆ ಸೇರಿದರೆ ಗುಣಮಟ್ಟದ ಶಿಕ್ಷಣ ಹಾಗೂ ಸರ್ಕಾರದ ಉಚಿತ ಸೌಲಭ್ಯಗಳನ್ನು ಪಡೆದು ಈ ದೇಶದ ಆಸ್ತಿಯಾಗಿ ಬೆಳೆಯಬಹುದು. ಪಟ್ಟಣದ ಹೊರ ವಲಯದಲ್ಲಿರುವ ನಮ್ಮ ಕಾಲೇಜು ತಾಲೂಕಿನಲ್ಲಿರುವ ಏಕೈಕ ಸರ್ಕಾರಿ ಪದವಿ ಪೂರ್ವ ಕಾಲೇಜು ಆಗಿದ್ದು, ಕಲಿಕೆಗೆ ಪೂರಕವಾದ ವಾತಾವರಣವನ್ನು ಹೊಂದಿದ್ದು ವಿಜ್ಞಾನ ವಿಭಾಗ, ವಾಣಿಜ್ಯ ಹಾಗೂ ಕಲಾ ವಿಭಾಗಗಳನ್ನು ಹೊಂದಿದ್ದು, ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ತರಲು ನಮ್ಮ ಉಪನ್ಯಾಸಕರು ಶ್ರಮಿಸುತ್ತಿದ್ದಾರೆ, ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆ ಹಾಗೂ ಸಹಪಠ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
Local News – ಸರ್ಕಾರಿ ಕಾಲೇಜು ಉಳಿಸುವ ಕೆಲಸ ಮಾಡಬೇಕು
ತಾಲೂಕಿನ ಏಕೈಕ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ತಾಲೂಕಿನ ಜನತೆ ಉಳಿಸುವ ಜವಾಬ್ದಾರಿ ವಹಿಸಬೇಕಿದೆ, ಬಾಗೇಪಲ್ಲಿ, ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರದ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುವ ಮುನ್ನ ನಮ್ಮ ಸರಕಾರಿ ಕಾಲೇಜಿಗೆ ಒಮ್ಮೆ ಬೇಟಿ ಕೊಟ್ಟು ಪರಿಶೀಲನೆ ನಡೆಸಿ. ಸ್ಥಳಿಯ ಸರ್ಕಾರಿ ಕಾಲೇಜಿಗೆ ಸೇರಿದರೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಮಯದ ಉಳಿತಾಯ ಹಾಗೂ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು, ಹಾಗಾಗಿ ಸರಕಾರಿ ನೌಕರರು, ನಾಗರಿಕರು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಾಖಲಿಸುವಂತೆ ಮನವಿ ಮಾಡಿದರು.
ಹಿರಿಯ ಉಪನ್ಯಾಸಕ ಆರ್.ಜಿ.ಸೋಮಶೇಖರ್ ಮಾತನಾಡಿ ಇಂದಿನ ಮಕ್ಕಳೇ ಮುಂದಿನ ನಮ್ಮ ದೇಶದ ಆಸ್ತಿಯಾಗಿದ್ದು ಅಂತಹ ಮಕ್ಕಳನ್ನು ಓದಿಸುವ ಜವಾಬ್ದಾರಿ ಎಲ್ಲರದ್ದಾಗಿರುತ್ತದೆ. ಹಾಗಾಗಿ ದೂರದ ಖಾಸಗೀ ಕಾಲೇಜುಗಳಿಗೆ ಸೇರಿಸಿ ಲಕ್ಷಾಂತರ ರುಪಾಯಿ ಹಣ ವ್ಯರ್ಥ ಮಾಡಿಕೊಳ್ಳುವ ಬದಲು ಗುಣಮಟ್ಟದ ಶಿಕ್ಷಣದ ಜೊತೆಗೆ, ವಿಶಾಲವಾದ ಮೈದಾನ ಹಾಗೂ ನಿಶ್ಯಬ್ಧವಾದ ಕಲಿಕಾ ವಾತಾವರಣ, ಅತ್ಯುತ್ತಮ ಬೋಧಕವರ್ಗ ಹಾಗೂ ಉಚಿತ ಸೌಲಭ್ಯಗಳು, ಉಚಿತ ಶಿಕ್ಷಣವನ್ನು ನೀಡುವ ಸರಕಾರಿ ಕಾಲೇಜಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು , ಸಿಬ್ಬಂದಿ ಹಾಗೂ ಹಂಪಸಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.