ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎನ್.ಡಿ.ಎ ಕೂಟ (NDA)ಅಂದುಕೊಂಡಷ್ಟು ಸ್ಥಾನಗಳಲ್ಲಿ ಜಯ ಗಳಿಸಲು ವಿಫಲವಾಯ್ತು. ಅದರಲ್ಲೂ ಬಿಜೆಪಿ (BJP) ಪಕ್ಷ ಆ ಕ್ಷೇತ್ರಗಳಲ್ಲಿ ಗೆಲುತ್ತೆ ಎಂದುಕೊಂಡಿದ್ದೆಲ್ಲಾ ಸುಳ್ಳಾಯ್ತು. ಜೊತೆಗೆ ಸಮೀಕ್ಷೆಗಳೂ ಸಹ ತಲೆ ಕೆಳಗಾಯ್ತು. ಇದೀಗ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಿದಂತೆ ಮುಂಬರುವ ಚುನಾವಣೆಯಲ್ಲಿ ಗುಜರಾತ್ (Gujarat)ನಲ್ಲೂ ಬಿಜೆಪಿಯನ್ನು ಸೋಲಿಸಲಾಗುತ್ತದೆ ಎಂದು ಗುಡುಗಿದ್ದಾರೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಹಮದಾಬಾದ್ ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಾ ಬಿಜೆಪಿ ವಿರುದ್ದ ಗುಡುಗಿದ್ದಾರೆ. ಬಿಜೆಪಿ ಪಕ್ಷದವರು ನಮಗೆ ಬೆದರಿಕೆ ಹಾಕಿ, ನಮ್ಮ ಕಚೇರಿಗೆ ಹಾನಿ ಮಾಡಿ ನಮಗೆ ಸವಾಲು ಹಾಕಿದ್ದಾರೆ. ನಮ್ಮ ಕಚೇರಿಗೆ ಹಾನಿ ಮಾಡಿದಂತೆ ಅದರ ಸರ್ಕಾರವನ್ನು ಒಡೆಯಲು ಹೊರಟಿದ್ದೇವೆ ಎಂದು ನಿಮಗೆ ನಾನು ಹೇಳುತ್ತೇನೆ. ಗುಜರಾತ್ ನಲ್ಲಿ ಕಾಂಗ್ರೇಸ್ ಸ್ಪರ್ಧೆ ಮಾಡುತ್ತದೆ. ನರೇಂದ್ರ ಮೋದಿಯನ್ನು ಚುನಾವಣೆಯಲ್ಲಿ ಸೋಲಿಸುತ್ತೇವೆ ಎಂಬುದನ್ನು ಬರೆದು ಇಟ್ಟುಕೊಳ್ಳಿ. ನಾವು ಅಯೋಧ್ಯೆಯಲ್ಲಿ (Ayodhya) ಬಿಜೆಪಿಯನ್ನು ಯಾವ ರೀತಿ ಸೋಲಿಸಿದ್ದೇವೋ ಅದೇ ರೀತಿಯಲ್ಲಿ ಬಿಜೆಪಿಯನ್ನು ಸಹ ಸೋಲಿಸುತ್ತೇವೆ ಮುಂದಿನ ಚುನಾವಣೆಯಲ್ಲಿ ಗುಜರಾತ್ ಅನ್ನು ಕಾಂಗ್ರೇಸ್ ಗೆಲ್ಲುತ್ತದೆ. ಗುಜರಾತ್ ರಾಜ್ಯದಿಂದ ಹೊಸ ಆರಂಭವನ್ನು ಮಾಡುತ್ತದೆ ಎಂದು ಗುಡುಗಿದರು.
ಇನ್ನೂ ಅಹಮದಾಬಾದ್ ನ ಪಾಲ್ಡಿ ಪ್ರದೇಶದಲ್ಲಿ ಕಳೆದ ಜುಲೈ 2 ರಂದು ಕಾಂಗ್ರೇಸ್ ಪಕ್ಷದ ರಾಜ್ಯ ಪ್ರಧಾನ ಕಚೇರಿಯಾದ ರಾಜೀವ್ ಗಾಂಧಿ ಭವನದ ಬಳಿ ಬಿಜೆಪಿ ಪಕ್ಷದ ಯುವ ಘಟಕದ ಸದಸ್ಯರು ಲೋಕಸಭಾ ಕಲಾಪದಲ್ಲಿ ರಾಹುಲ್ ಗಾಂಧಿ ಹಿಂದೂಗಳ ಬಗ್ಗೆ ನೀಡಿದ ಹೇಳಿಕೆಯನ್ನು ವಿರೋಧಿಸಲು ಜಮಾಯಿಸಿದ್ದರು. ಈ ವೇಳೆ ಕಾಂಗ್ರೇಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ನಡೆದ ಘರ್ಷಣೆಯ ಬಗ್ಗೆ ಸಹ ರಾಹುಲ್ ಮಾತನಾಡಿದರು. ಇನ್ನೂ ರಾಮಮಂದಿರ ಉದ್ಘಾಟನೆಗೆ ಒಬ್ಬನೇ ಒಬ್ಬ ಸ್ಥಳೀಯ ವ್ಯಕ್ತಿಯನ್ನು ಬಿಜೆಪಿ ಆಹ್ವಾನಿಸಿರಲಿಲ್ಲ. ಅದರಿಂದ ಅಯೋಧ್ಯೆಯ ಜನ ಕೋಪ ಗೊಂಡು ಬಿಜೆಪಿಯನ್ನು ಸೋಲಿಸಿದರು. ಪ್ರಧಾನಿ ಮೋದಿಯವರು ಸಹ ಅಯೋಧ್ಯೆಯಿಂದ ಸ್ಪರ್ಧೆ ಮಾಡಲು ಬಯಸಿದ್ದರು. ಕ್ಷೇತ್ರದ ಸರ್ವೆ ಮಾಡಿದ ಬಳಿಕ ಅವರು ಸ್ಫರ್ಧೆಯಿಂದ ಹಿಂದೆ ಸರಿದರು. ಒಂದು ವೇಳೆ ಮೋದಿ ಸ್ಪರ್ಧೆ ಮಾಡಿದ್ದರೇ ಸೋಲುತ್ತಿದ್ದರು ಜೊತೆಗೆ ಅವರ ರಾಜಕೀಯ ಜೀವನ ಕೊನೆಯಾಗುತ್ತದೆ ಎಂದು ಸರ್ವೆ ಮಾಡಿದವರು ಸಲಹೆ ನೀಡಿದ್ದರು ಎಂದು ರಾಗಾ ತಿಳಿಸಿದರು.