ನಾಡಪ್ರಭು ಕೆಂಪೇಗೌಡ ಅವರ ಒಡನಾಟ ಪಡೆದ ಕರ್ನಾಟಕದ ನಾವೆಲ್ಲ ಧನ್ಯರು. ಯಾಕೆಂದರೆ ನಗರ ಹೇಗಿರಬೇಕೆಂದು ಬಹಳ ದೂರದೃಷ್ಟಿಯುಳ್ಳವರಾಗಿದ್ದು ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅವರ ಆಡಳಿತ, ದೂರದೃಷ್ಟಿ ಎಲ್ಲರಿಗೂ ಮಾದರಿಯಾಗಿದ್ದು, ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಪಾವಗಡ ತಾಲೂಕಿನ ಗೌಡೇಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ತಿಮ್ಮೇಶಪ್ಪ ತಿಳಿಸಿದರು.
ಪಾವಗಡ ತಾಲೂಕಿನ ಗೌಡೇಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 515ನೇ ನಾಡಪ್ರಭು ಕೆಂಪೇಗೌಡ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರನ್ನು ದೂರದೃಷ್ಠಿಯಿಂದ ಸಮಗ್ರವಾಗಿ ಕಟ್ಟಿದ ನಾಡಫ್ರಭು ಕೆಂಪೇಗೌಡ, ಎಲ್ಲ ಸಮಾಜಗಳ ಜನರ ಕಸುಬು ಹಾಗೂ ವ್ಯಾಪಾರಗಳಿಗೆ ಪೇಟೆಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಟ್ಟಿದ್ದರು, ಬೆಂಗಳೂರು ವಿಶ್ವದ ಭೂಪಟದಲ್ಲಿ ಸ್ಥಾನ ಗಣಿಸುವ ಹಾಗೆ ಅಭಿವೃದ್ಧಿಪಡಿಸಿದ ಅವರ ಕೊಡುಗೆ ಸ್ಮರಣೀಯವಾದುದು. ಬೆಂಗಳೂರು ನಿರ್ಮಾಣದ ಹೊತ್ತಲ್ಲಿ ಕುಲಕಸುಬುಗಳನ್ನು ಸೃಷ್ಟಿಸಿದ್ದು, ಹೊರೆಗಲ್ಲುಗಳನ್ನು ನಿರ್ಮಿಸಿದ್ದು ಅವರ ದೂರದೃಷ್ಟಿ ಚಿಂತನೆ ತೋರಿಸುತ್ತದೆ. ನಾವಿರುವ ವಾತಾವರಣ ನಮ್ಮದು ಎಂಬ ರಕ್ಷಣೆ ಚಿಂತನೆ ಮೂಡಿದಾಗಲೇ ಸುಂದರ ವಾತಾವರಣ ನಿರ್ಮಾಣ ಸಾಧ್ಯ. ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರವನ್ನು ಕಟ್ಟಿ ಬೆಳೆಸಿದವರು ಅವರು ಹೋರಾಟ ಆದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಬೇಕು. ವಿದ್ಯಾರ್ಥಿಗಳು ಕೆಂಪೇಗೌಡರ ಜೀವನ ಚರಿತ್ರೆ ಹೋರಾಟದ ಬಗ್ಗೆ ತಿಳಿದುಕೊಳ್ಳುವ ಮೂಲಕ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಬಳಿಕ ಶಿಕ್ಷಕ ನರಸಿಂಹರೆಡ್ಡಿ ಮಾತನಾಡಿ, ಕೆಂಪೇಗೌಡರು, ತಮ್ಮ ಅಧಿಕಾರವನ್ನು ಜನಪರ ಕೆಲಸಗಳಿಗೆ ಬಳಸಿಕೊಂಡು ಸಾವಿರಾರು ಕೆರೆಗಳು, ನೂರಾರು ಬಾವಿಗಳನ್ನು ತೋಡಿಸುವುದು, ರಸ್ತೆ ಎರಡು ಬದಿಗಳಲ್ಲಿ ಗಿಡಗಳನ್ನು ಬೆಳೆಸುವುದು ಮಾತ್ರವಲ್ಲದೇ ಕೋಟೆ ಕಟ್ಟಿ, ಬೆಂಗಳೂರಿನಂತಹ ಹೊಸದೊಂದು ಊರನ್ನೇ ಸೃಷ್ಟಿ ಮಾಡಿದರು. ಜೊತೆಗೆ ಅಲ್ಲಿಗೆ ಬೇಕಾದ ವಿವಿಧ ಕಸಬುಗಳಿಗೆ ಅನುಗುಣವಾಗಿ ಪೇಟೆಗಳ ಸ್ಥಾಪಿಸಿ, ರಕ್ಷಣೆಗಾಗಿ ಕಾವಲು ಗೋಪುರಗಳ ನಿರ್ಮಾಣ ಮಾಡುವ ಮೂಲಕ ಹೇಗೆ ಜನಾನುರಾಗಿಯಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಇದೇ ಸಮಯದಲ್ಲಿ ಶಿಕ್ಷಕರಾದ ಮಹಾಂತಪ್ಪ ಪೂಜಾರಿ ಮಾತನಾಡಿದರು. ಅತಿಥಿ ಶಿಕ್ಷಕರಾದ ವರುಣ್ ಕುಮಾರ್, ಮಾಧವ್, ರಾಜೇಶ್ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.