Farmer – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಕಂಬಾಲಹಳ್ಳಿ ಗ್ರಾಮದ ರೈತ ಅಶ್ವತ್ಥಪ್ಪ ಅವರ ಬದುಕು ಬಿತ್ತನೆಯಲ್ಲೇ ಕಮರಿ ಹೋದಂತಾಗಿದೆ. ಅವರು ನಂಬಿ ಬಿತ್ತಿದ ಕುಂಬಳಕಾಯಿ ಬೀಜಗಳು ಕಳಪೆಯಾಗಿದ್ದರಿಂದ ಫಸಲು ಬಾರದೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಇದರಿಂದ ಕಂಗಾಲಾಗಿರುವ ಅಶ್ವತ್ಥಪ್ಪ ಅವರಿಗೆ ಸೂಕ್ತ ಪರಿಹಾರ ನೀಡುವಂತೆ ರೈತ ಸಂಘವು ಒತ್ತಾಯಿಸಿದೆ.
Farmer – ರೈತ ವಿರೋಧಿ ನೀತಿಗಳಿಂದ ಸಂಕಷ್ಟದಲ್ಲಿರುವ ರೈತ
“ಈಗಾಗಲೇ ರೈತ ವಿರೋಧಿ ನೀತಿಗಳಿಂದ ರೈತ ಬೀದಿಗೆ ಬಂದಿದ್ದಾನೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾನೆ. ಇಂತಹ ಸಂಕಷ್ಟದ ಸಮಯದಲ್ಲಿ ಸಾಲ ಮಾಡಿ ಬಿತ್ತನೆ ಮಾಡಿದರೂ ಕಳಪೆ ಬೀಜಗಳಿಂದ ಮೋಸ ಹೋಗುತ್ತಿರುವುದು ದುರಂತ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಹಾಕಿದರೆ, ಕಳಪೆ ಬೀಜಗಳಿಂದ ಫಸಲು ಬಾರದೆ ಸಾಲದ ಸುಳಿಗೆ ಸಿಲುಕುತ್ತಿದ್ದಾನೆ. ಈ ಎಲ್ಲ ಕಾರಣಗಳಿಂದ ರೈತ ಅವನತಿಯತ್ತ ಸಾಗುತ್ತಿದ್ದಾನೆ,” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ)ದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಶ್ವಿನಿ ಆಗ್ರೋ ಸೀಡ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ
ಕಂಬಾಲಹಳ್ಳಿ ರೈತ ಅಶ್ವತ್ಥಪ್ಪ ಅವರಿಗೆ ಚಿಕ್ಕಬಳ್ಳಾಪುರದ ಅಶ್ವಿನಿ ಆಗ್ರೋ ಸೀಡ್ಸ್ ಅಂಗಡಿಯಿಂದ ನೀಡಲಾದ ಕುಂಬಳಕಾಯಿ ಬೀಜಗಳು ಕಳಪೆಯಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಂಪನಿಯವರು ರೈತನಿಗೆ ಪರಿಹಾರ ಕೊಡಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು. Read this also : ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದವನಿಗೆ ತಾಯಿಯಿಂದ ಚಪ್ಪಲಿಯಿಂದ ಥಳಿತ, ವೈರಲ್ ಆದ ವಿಡಿಯೋ…!
Farmer – ಸಂಕಷ್ಟ ತೋಡಿಕೊಂಡ ರೈತ ಅಶ್ವತ್ಥಪ್ಪ
ತಮ್ಮ ಸಂಕಟವನ್ನು ತೋಡಿಕೊಂಡ ರೈತ ಅಶ್ವತ್ಥಪ್ಪ, “ನಾನು ಹಲವು ವರ್ಷಗಳಿಂದ ಬೇರೆಯವರ ಜಮೀನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದೇನೆ. ಈ ಬಾರಿಯೂ ಕುಂಬಳಕಾಯಿ ಬೆಳೆ ಹಾಕಿದ್ದೆ. ಆದರೆ ಈ ಬೀಜ ಕಳಪೆಯಾಗಿದೆ. ಫಸಲು ವಿಚಿತ್ರವಾಗಿ ಬಂದಿದೆ. ಕೆಲವು ಕುಂಬಳಕಾಯಿಗಳು ಸೋರೆಕಾಯಿ ಆಕಾರದಲ್ಲಿದ್ದರೆ, ಮತ್ತೆ ಕೆಲವು ಬಿಳಿ ಮತ್ತು ಹಸಿರು ಬಣ್ಣದಲ್ಲಿ ಬೆಳೆದಿವೆ. ಇವುಗಳನ್ನು ಮಾರುಕಟ್ಟೆಯಲ್ಲಿ ಯಾರೂ ಕೊಳ್ಳುವುದಿಲ್ಲ. ಈ ಬಗ್ಗೆ ಚಿಕ್ಕಬಳ್ಳಾಪುರದ ಅಶ್ವಿನಿ ಆಗ್ರೋ ಸೀಡ್ಸ್ ಮಾಲೀಕರಿಗೆ ದೂರವಾಣಿ ಮೂಲಕ ತಿಳಿಸಿದ್ದೆ. ಅಂಗಡಿಯವರು ಬಂದು ಪರಿಶೀಲಿಸಿ ಮಾದರಿಯನ್ನು ತೆಗೆದುಕೊಂಡು ಹೋದರು. ಪರಿಹಾರ ಕೊಡಿಸುವುದಾಗಿ ಹೇಳಿ ಮೂರು ತಿಂಗಳು ಕಳೆದರೂ ಯಾವುದೇ ಸ್ಪಂದನೆ ಇಲ್ಲ. ಕರೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ,” ಎಂದು ನೋವಿನಿಂದ ನುಡಿದರು.
ರೈತ ಸಂಘದಿಂದ ಬೆಂಬಲ, ಹೋರಾಟದ ಎಚ್ಚರಿಕೆ
ಈ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ)ದ ಕಾರ್ಯಕರ್ತರು ರೈತನ ಜಮೀನಿಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಮಸ್ಯೆಯನ್ನು ಬಗೆಹರಿಸಿ ರೈತನಿಗೆ ಸೂಕ್ತ ಪರಿಹಾರ ನೀಡಬೇಕು. ತಪ್ಪಿದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಆಗ್ರಹಿಸಿದರು.