Japan – ಪ್ರೀತಿಯಲ್ಲಿ ವಿಫಲರಾದಾಗ ಕೆಲವರು ಯಾವ ಹಂತಕ್ಕೂ ಇಳಿಯಬಹುದು ಎಂಬುದಕ್ಕೆ ಜಪಾನ್ನ ಒಸಾಕಾದಲ್ಲಿ ನಡೆದ ಈ ಭಯಾನಕ ಘಟನೆ ಸಾಕ್ಷಿಯಾಗಿದೆ. ಬ್ರೇಕಪ್ನಿಂದ ತೀವ್ರವಾಗಿ ನೊಂದ ಯುವತಿಯೊಬ್ಬಳು ತನ್ನ ಪ್ರಿಯಕರನ ಕೈಬೆರಳನ್ನೇ ಕತ್ತರಿಸಿ ಫ್ರಿಜ್ನಲ್ಲಿ ಇಟ್ಟಿರುವ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ. ಈ ಘಟನೆ ಜಪಾನ್ನಲ್ಲಿ ತೀವ್ರ ಸಂಚಲನ ಮೂಡಿಸಿದೆ.
Japan – ಪ್ರಿಯಕರನ ಬೆರಳು ಕತ್ತರಿಸಿ ಫ್ರಿಜ್ಗೆ ಹಾಕಿದ ಪ್ರೇಯಸಿ
ವರದಿಗಳ ಪ್ರಕಾರ, ಬ್ರೇಕಪ್ನಿಂದ ಕೋಪಗೊಂಡ 20 ವರ್ಷದ ಸಾಕಿ ಸಾಟೊ ಎಂಬ ಯುವತಿ ತನ್ನ 21 ವರ್ಷದ ಪ್ರಿಯಕರನ ಉಂಗುರದ ಬೆರಳನ್ನು ಕತ್ತರಿಸಿದ್ದಾಳೆ. ಆಕೆ ತನ್ನ ಪ್ರಿಯಕರನನ್ನು ತೀವ್ರವಾಗಿ ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ತಾನು ಉಂಗುರ ತೊಡಿಸಬೇಕಾದ ಬೆರಳಿಗೆ ಬೇರೆಯವರು ಉಂಗುರ ಹಾಕಬಹುದು ಎಂಬ ಅತಿಯಾದ ಕೋಪದಿಂದ ಈ ಕೃತ್ಯ ಎಸಗಿದ್ದಾಳೆ ಎಂದು ಹೇಳಲಾಗಿದೆ. ಕತ್ತರಿಸಿದ ಬೆರಳನ್ನು ಆಕೆ ಫ್ರಿಜ್ನಲ್ಲಿ ಇಟ್ಟಿರುವುದು ಮತ್ತಷ್ಟು ಆಘಾತವನ್ನುಂಟು ಮಾಡಿದೆ.
Japan – ಸ್ವತಃ ಪೊಲೀಸರಿಗೆ ಕರೆ ಮಾಡಿದ ಸಂತ್ರಸ್ತ
ಹೊನ್ಶು ದ್ವೀಪದ ಕನ್ಸೈ ಪ್ರದೇಶದ ಒಸಾಕಾದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಯುವಕ ಸ್ವತಃ ಪೊಲೀಸರಿಗೆ ಕರೆ ಮಾಡಿ ತನಗೆ ಸಂಭವಿಸಿದ ಭಯಾನಕ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಯುವಕನ ಹೆಸರನ್ನು ಗೌಪ್ಯವಾಗಿಡಲಾಗಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಬ್ರೇಕಪ್ ಕುರಿತು ವಾಗ್ವಾದ ನಡೆದ ನಂತರ ಗೆಳತಿ ಸಾಕಿ ಸಾಟೊ ಹಲ್ಲೆ ನಡೆಸಿದ್ದಾಳೆ ಎಂದು ಯುವಕ ತಿಳಿಸಿದ್ದಾನೆ. ಹೇಗೋ ಮಾಡಿ ಪೊಲೀಸರ ಸಹಾಯ ಕೋರಿದ ಆತನನ್ನು ರಕ್ಷಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಇಬ್ಬರೂ ಒಂದೇ ಫ್ಲಾಟ್ನಲ್ಲಿ ಪತ್ತೆಯಾಗಿದ್ದಾರೆ. ಯುವಕನ ಎಡ ಕೆನ್ನೆ ಮತ್ತು ಮೂಗಿನ ಮೇಲೆ ಗಾಯಗಳ ಗುರುತುಗಳಿದ್ದವು.
Japan – ಪ್ರೀತಿ, ನಿಯಂತ್ರಣ ಮತ್ತು ಹಿಂಸೆ
ಪ್ರಾಥಮಿಕ ತನಿಖೆಯ ಪ್ರಕಾರ, 2023 ರಲ್ಲಿ 19 ವರ್ಷದವನಿದ್ದಾಗ ಯುವಕನು ಆನ್ಲೈನ್ನಲ್ಲಿ ಸಾಟೊ ಅವರ ಕೆಲವು ಚಿತ್ರಗಳನ್ನು ನೋಡಿದ್ದ ಮತ್ತು ಆಕೆಯ ಮುಗ್ಧ ನೋಟಕ್ಕೆ ಆಕರ್ಷಿತನಾಗಿದ್ದ. ನಂತರ ಇಬ್ಬರೂ ಪ್ರೀತಿಯಲ್ಲಿ ಬಿದ್ದು, ಜುಲೈ ತಿಂಗಳಿನಿಂದ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು. ಆದರೆ, ಸಾಟೊ ಪ್ರಾಬಲ್ಯ ಹೊಂದಿರುವ ಸ್ವಭಾವದವಳಾಗಿದ್ದಳು. ಅವಳು ಹೇಳಿದಂತೆ ಕೇಳುವ ಹುಡುಗರನ್ನು ಆಕೆ ಇಷ್ಟಪಡುತ್ತಿದ್ದಳು. ಕೆಲವೇ ದಿನಗಳಲ್ಲಿ ಆಕೆ ತನ್ನ ಪ್ರಿಯಕರನನ್ನು ನಿಯಂತ್ರಿಸಲು ಪ್ರಾರಂಭಿಸಿದ್ದಳು. ಅವನ ಬ್ಯಾಂಕ್ ಪಾಸ್ಬುಕ್ ಮತ್ತು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಳು ಎನ್ನಲಾಗಿದೆ.
Japan – ಕತ್ತರಿಸಿದ ಬೆರಳು ಮದ್ಯದಲ್ಲಿ, ಫ್ರಿಜ್ನಲ್ಲಿ ಭದ್ರ!
ವರದಿಗಳ ಪ್ರಕಾರ, ಕಳೆದ ಅಕ್ಟೋಬರ್ನಲ್ಲಿ ಬ್ರೇಕಪ್ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಸಾಟೊ ಚಾಕುವಿನಿಂದ ಯುವಕನ ಉಂಗುರದ ಬೆರಳನ್ನು ಕತ್ತರಿಸಿ ಮದ್ಯದಲ್ಲಿ ಹಾಕಿ ಫ್ರಿಜ್ನಲ್ಲಿ ಇಟ್ಟಿದ್ದಳು. ಆದರೆ, ಆರೋಪಿ ಗೆಳತಿ ಮಾತ್ರ ಯುವಕನೇ ಸ್ವಯಂ ಪ್ರೇರಿತನಾಗಿ ಹೀಗೆ ಮಾಡಿಕೊಂಡಿದ್ದಾನೆ ಎಂದು ಹೇಳುತ್ತಿದ್ದಾಳೆ. ಪೊಲೀಸರು ಆಕೆಯ ಹೇಳಿಕೆಯನ್ನು ನಂಬಲು ಸಿದ್ಧರಿಲ್ಲ ಮತ್ತು ತನಿಖೆಯನ್ನು ಮುಂದುವರೆಸಿದ್ದಾರೆ. Read this also : ಒಣಗಿದ ಮಾವಿನ ಎಲೆಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆ, ಒಂದು ಪ್ಯಾಕೆಟ್ಗೆ ₹500 ಅಂತೆ ನೋಡು ಗುರು…!
Japan – ಸುಂದರ ಗೆಳತಿಯ ಕಿರುಕುಳ ಸಹಿಸಿದ ಪ್ರಿಯಕರ
ಸಂತ್ರಸ್ತ ಯುವಕನ ಹೇಳಿಕೆಯ ಪ್ರಕಾರ, ಆತನ ಗೆಳತಿ ತುಂಬಾ ಸುಂದರಿಯಾಗಿದ್ದಳು ಮತ್ತು ಆಕೆಯನ್ನು ಬಿಟ್ಟು ಹೋಗಲು ಸಾಧ್ಯವಾಗದ ಕಾರಣ ಆಕೆಯ ಕಿರುಕುಳವನ್ನು ಸಹಿಸಿಕೊಂಡಿದ್ದ. ಈ ಬಗ್ಗೆ ಆತ ಯಾರಿಗೂ ತಿಳಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಈ ಆಘಾತಕಾರಿ ಘಟನೆ ಜಪಾನಿನ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ ಮತ್ತು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಈ ಪ್ರಕರಣವು ಪ್ರೀತಿ, ಸಂಬಂಧಗಳು ಮತ್ತು ಹಿಂಸೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.