ಇಂದಿನ ಆಧುನಿಕ ಕಾಲದಲ್ಲಿ ತಂತ್ರಜ್ಞಾನ, ಮೊಬೈಲ್, ಇಂಟರ್ ನೆಟ್ ಗಳ ಕಾರಣದಿಂದ ನಮ್ಮ ಜಾನಪದ (Janapada) ಕಲೆಗಳು ಮರೆಯಾಗುತ್ತಿವೆ. ಇಂದಿನ ಯುವಕರು ಜಾನಪದ (Janapada) ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಪರಿಸರ ವೇದಿಕೆಯ ಗುಂಪು ಮರದ ಆನಂದ್ ತಿಳಿಸಿದರು.
ಚಿಕ್ಕಬಳ್ಲಾಪುರದ ಗುಡಿಬಂಡೆ ಪಟ್ಟಣದಲ್ಲಿ ದಸರಾ ಗಣೇಶ ಸಮಿತಿ ವತಿಯಿಂದ ಅಂಬೇಡ್ಕರ್ ವೃತ್ತದ ಬಳಿ ಹಮ್ಮಿಕೊಂಡಿದ್ದ ದಸರಾ ಗಣೇಶ ಉತ್ಸವದ ಅಂಗವಾಗಿ ಪಂಡರಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ಟಿವಿಗಳು, ಮೊಬೈಲ್ ಗಳ ಕಾರಣದಿಂದ ಜಾನಪದ ಕಲೆಗಳು ಮರೆಯಾಗುತ್ತಿವೆ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹ ಜಾನಪದ ಕಲೆಗಳು ಕಣ್ಮರೆಯಾಗುತ್ತಿವೆ. ಜಾನಪದ ಕಲೆಗಳು ಕೇವಲ ಮನರಂಜನೆಯಾಗಿ ಮಾತ್ರವಲ್ಲದೇ ಜೀವನವನ್ನು ರೂಪಿಸುವ ಅಂಶಗಳನ್ನು ಸಹ ಒಳಗೊಂಡಿರುತ್ತದೆ. ಮರೆಯಾಗುತ್ತಿರುವ ಈ ಕಲೆಯನ್ನು ಯುವಕರು ಉಳಿಸಿ ಬೆಳೆಸಲು ಮುಂದಾಗಬೇಕೆಂದು ಸಲಹೆ ನೀಡಿದರು.
ಬಳಿಕ ಕಸಾಪ ಅಧ್ಯಕ್ಷ ಬಿ.ಮಂಜುನಾಥ್ ಮಾತನಾಡಿ, ದಸರಾ ಗಣೇಶ ಉತ್ಸವ ಸಮಿತಿ ವತಿಯಿಂದ ಪಂಡರಿ ಭಜನಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಹಾಗೂ ಮೆಚ್ಚುವಂತಹ ವಿಚಾರ. ಈ ರೀತಿಯ ಆಚರಣಾ ಸಮಿತಿಗಳು ಜನಪದ ಕಲೆಗಳನ್ನು ಪ್ರೋತ್ಸಾಹ ನೀಡಬೇಕು. ಅನೇಕರು ಭಜನೆ, ಕೋಲಾಟ, ಚಕ್ಕೆ ಭಜನೆ, ಹರಿಕಥೆ ಮೊದಲಾದವುಗಳನ್ನು ಮರೆತಿದ್ದಾರೆ. ನಮ್ಮ ಮಕ್ಕಳಿಗೆ ಅವುಗಳ ಬಗ್ಗೆ ಏನೂ ತಿಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ಗಣೇಶ ಉತ್ಸವಗಳಂತಹ ಕಾರ್ಯಕ್ರಮಗಳಲ್ಲಿ ಈ ರೀತಿಯ ಜಾನಪದ ಕಲೆಗಳನ್ನು ಸಾರುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಜಾನಪದ ಕಲೆಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು.
ಇನ್ನೂ ರಾತ್ರಿಯಾದರೂ ಸಹ ಜನರು ಪಂಡರಿ ಭಜನೆಯನ್ನು ವೀಕ್ಷಣೆ ಮಾಡಿ ಮನರಂಜನೆ ಪಡೆದರು. ಈ ವೇಳೆ ದಸರಾ ಗಣೇಶ ಸಮಿತಿ ಅಧ್ಯಕ್ಷೆ ಅಂಬಿಕಾ, ಸಮಿತಿಯ ಸದಸ್ಯರಾದ ನಿತಿನ್, ಹರಿಕೃಷ್ಣ, ಮಧು, ಶಿಕ್ಷಕರಾದ ರಾಮಾಂಜಿ, ಮನೋಹರ್, ಮಂಜುನಾಥ್ ಸೇರಿದಂತೆ ಹಲವರು ಇದ್ದರು.