ಭಾರತಕ್ಕೆ ಸೇರಿರುವ POK ಯನ್ನು ಮತ್ತೆ ಭಾರತದ ವಶಕ್ಕೆ ಪಡೆದೇ ಪಡೆಯುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿದ್ದು, ಈ ನಡುವೆ ಬುಧವಾರ ಪಶ್ಚಿಮ ಬಂಗಾಳದ ಸೆರಾಂಪೋರ್ ನಲ್ಲಿ ನಡೆದ ಚುನಾವಣಾ ರಾಲಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತದ ಸಾರ್ವಭೌಮತ್ವದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಜಮ್ಮು ಹಾಗು ಕಾಶ್ಮೀರದಲ್ಲಿದ್ದ ಕಾನೂನು ಸುವ್ಯವಸ್ಥೆಯ ಬಗ್ಗೆ ಸಹ ಪ್ರತಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆಯ ನಿಮಿತ್ತ ಪಶ್ಚಿಮ ಬಂಗಾಳದ ಸೇರಾಂಪೋರ್ ನಲ್ಲಿ ನಡೆದಂತಹ ಚುನಾವಣಾ ಪ್ರಚಾರದ ಸಮಯದಲ್ಲಿ ಪಿಒಕೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಆರ್ಟಿಕಲ್ 370 ರದ್ದುಗೊಳಿಸಿದಾಗಿನಿಂದ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಜಾದಿ ಘೊಷಣೆಗಳು ಹೆಚ್ಚಾಗುತ್ತಿದೆ. ಈಗಾಗಲೇ ಪಿಒಕೆಯಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದೆ. ಅಲ್ಲಿನ ಸರ್ಕಾರದ ವಿರುದ್ದ ಸ್ಥಳೀಯರು ತಿರುಗಿ ಬೀಳುತ್ತಿದ್ದಾರೆ. ಭಾರತಕ್ಕೆ ಮರಳುವ ಬಗ್ಗೆ ಘೋಷಣೆಗಳು ಸಹ ಕೇಳಿಬರುತ್ತಿದೆ. ಪಿಒಕೆ ಭಾರತಕ್ಕೆ ಸೇರಿದ್ದಾಗಿದೆ. ಅದನ್ನು ನಾವು ವಶಕ್ಕೆ ಪಡದೇ ಪಡೆಯುತ್ತೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.
ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಕಾಂಗ್ರೇಸ್ ನಾಯಕ ಮಣಿಶಂಕರ್ ಅಯ್ಯರ್ ಅಣುಬಾಂಬ್ ಕುರಿತಂತೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಪ್ರತಿಕ್ರಿಯೆ ನೀಡಿದ ಅಮಿತ್ ಶಾ ದೇಶದ ಬಾಂಬ್ ಗಳ ಹೊರತಾಗಿಯೂ ಭಾರತವು ಪಿಒಕೆ ವಶಕ್ಕೆ ಪಡೆದುಕೊಳ್ಳುತ್ತದೆ ಎಂದಿದ್ದಾರೆ. ಮಣಿಶಂಕರ್ ಹಾಗೂ ಫಾರೂಕ್ ಅಬ್ದುಲ್ಲಾ ರವರಂತಹ ನಾಯಕರು ನೀಡುವ ಹೇಳಿಕೆಗಳು ರಾಷ್ಟ್ರದಲ್ಲಿ ಭಯವನ್ನು ಹುಟ್ಟಿಸುವಂತಹ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಮುಂದುವರೆದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿರುದ್ದ ಸಹ ವಾಗ್ದಾಳಿ ನಡೆಸಿದ್ದಾರೆ. ಮೋದಿ ಸರ್ಕಾರ ಪ್ರತಿಯೊಬ್ಬ ಬಡವ್ಯಕ್ತಿಗೆ ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಆದರೆ ಸಿಎಂ ಮಮತಾ ಬ್ಯಾನರ್ಜಿ ವಿತರಣೆ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ.